ಕೊಯ್ಯೂರು ಗ್ರಾಮದ ಅರಂತೊಟ್ಟುವಿನಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್
![ಕೊಯ್ಯೂರು ಗ್ರಾಮದ ಅರಂತೊಟ್ಟುವಿನಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್](https://namanachannel.in/wp-content/uploads/2022/12/IMG_20221206_092547-520x560.jpg)
![](https://namanachannel.in/wp-content/uploads/2022/12/IMG_20221206_092624-938x1024.jpg)
ಕೊಯ್ಯೂರು: ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬವರ ಮನೆಯಲ್ಲಿ ಅಪರೂಪದ ಸಾರಿಬಾಳ ಹಾವು ಪತ್ತೆಯಾಗಿದೆ.
ಸುಮಾರು 5 ಅಡಿ ಉದ್ದದ ಸಾರಿಬಾಳ ಹಾವು ಕೋಳಿ ಮರಿಯನ್ನು ನುಂಗುತ್ತಿದ್ದ ವೇಳೆ ಅದನ್ನು ಕಂಡ ಮನೆಯವರು ಉರಗ ತಜ್ಞ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಮನೆಗೆ ಧಾವಿಸಿದ ಸ್ನೇಕ್ ಅಶೋಕ್ ರಕ್ಷಿಸಿದ್ದಾರೆ.
ಜನವಸತಿ ಪ್ರದೇಶಗಳಲ್ಲಿ ತೀರ ಕಡಿಮೆ ಕಾಣಿಸಿಕೊಳ್ಳುವ ಈ ಸಾರಿಬಾಳ ಹಾವು ಮನೆಯಲ್ಲಿ ಪತ್ತೆಯಾಗಿರುವುದು ಮನೆ ಮಂದಿಗೆ ಆತಂಕವಾಗಿದೆ. ರಾತ್ರಿ ಸಮಯ ಹೆಚ್ಚಾಗಿ ಸಂಚಾರ ನಡೆಸುವ ಈ ಹಾವುಗಳ ಪ್ರಮುಖ ಆಹಾರವೇ ಸಣ್ಣ ಪ್ರಾಣಿ, ಪಕ್ಷಿ, ಮೊಟ್ಟೆ ಇತ್ಯಾದಿ.
ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಸ್ನೇಕ್ ಅಶೋಕ್ ಹೇಳಿದ್ದಾರೆ.