• July 27, 2024

ಜೂನ್ ನಲ್ಲಿ ಮರೈ ನ್ ಡಿಪ್ಲೋಮಾ ಕೋರ್ಸ್ ಆರಂಭ: ಮುಂಡಾಜೆ ಶಾಲೆ ಶತಮಾನೋತ್ಸವ ದಲ್ಲಿ ಶಾಸಕ ಹರೀಶ್ ಪೂಂಜ ಪ್ರಕಟಣೆ

 ಜೂನ್ ನಲ್ಲಿ ಮರೈ ನ್ ಡಿಪ್ಲೋಮಾ ಕೋರ್ಸ್ ಆರಂಭ: ಮುಂಡಾಜೆ ಶಾಲೆ ಶತಮಾನೋತ್ಸವ ದಲ್ಲಿ ಶಾಸಕ ಹರೀಶ್ ಪೂಂಜ ಪ್ರಕಟಣೆ

ಬೆಳ್ತಂಗಡಿ; “ಮುಂದಿನ ಜೂನ್ ನಲ್ಲಿ ಬೆಳ್ತಂಗಡಿಯಲ್ಲಿ ಮರೈನ್ ಡಿಪ್ಲೋಮಾ ಕೋರ್ಸ್ ಆರಂಭವಾಗಲಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಅನುಮೋದನೆ ದೊರೆತಿದ್ದು 5 ಕೋಟಿ ರೂ. ಅನುದಾನ ಕೂಡ ಮೀಸಲಿರಿಸಲಾಗಿದೆ” ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮುಂಡಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

“ಉತ್ತಮ ಚಿಂತನೆಗಳೊಂದಿಗೆ ಮಹತ್ವಾಕಾಂಕ್ಷೆ, ಇಚ್ಛಾ ಶಕ್ತಿ ಇರುವ ಹಿರಿಯರ ಸಹಕಾರ ಅಭಿವೃದ್ಧಿಗೆ ಪೂರಕ. ಮುಂಡಾಜೆಯ ಹಿರಿಯರು ಇಲ್ಲಿನ ಕಿರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇಲ್ಲಿನ ಶಾಲೆಗೆ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆದಿರುವುದು ಶ್ಲಾಘನೀಯ. ಈ ಶಾಲೆಗೆ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವ ಬಗ್ಗೆ ಶಿಕ್ಷಣ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು” ಎಂದರು.

ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ಅಧ್ಯಕ್ಷತೆ ವಹಿಸಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಮಾತನಾಡಿ “ಅಭಿವೃದ್ಧಿ ಅಂದರೆ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳೆಂಬ ನಮ್ಮ ಆಲೋಚನಾ ವ್ಯಾಪ್ತಿ ಮೀರಿ ವಿದ್ಯಾರ್ಥಿಗಳನ್ನು ಆಧುನಿಕ ಕಾಲಮಾನದ ಜೀವನಕ್ಕೆ ಅಣಿಗೊಳಿಸುವ ರೀತಿಯಲ್ಲಿ ಅವರನ್ನು ಸಿದ್ದಗೊಳಿಸುವುದು ಎಂಬುದಾಗಿ ಬದಲಾಗನೇಕಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ದಿಗೆ ಮಾರ್ಗದರ್ಶನ ಅಗತ್ಯ. ಶಾಲೆಯ ಅಭಿವೃದ್ದಿ ಸಮುದಾಯದ ಜವಾಬ್ದಾರಿ” ಎಂದರು.

ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಜಿಪಂ ಮಾಜಿ ಸದಸ್ಯೆ ನಮಿತಾ ಕೆ.ಪೂಜಾರಿ,
ತಾಪಂ ಮಾಜಿ ಸದಸ್ಯೆ ಲೀಲಾವತಿ, ಜಿ.ಪಂ ಎಇಇ ನಿತಿನ್ ಕುಮಾರ್ ನಾಯ್ಕ್, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎ. ರಾಮಣ್ಣ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಬಂಗೇರ, ಮುಖ್ಯ ಶಿಕ್ಷಕಿ ಮಂಜುಳಾ, ವಿದ್ಯಾರ್ಥಿ ನಾಯಕಿ ಹರ್ಷಿತಾ ಉಪಸ್ಥಿತರಿದ್ದರು.


ಕೃಷಿಕ ಅಡೂರು ವೆಂಕಟ್ರಾಯ ಸ್ವಸ್ತಿ ವಾಚನ ನಡೆಸಿದರು. ಮುಖ್ಯಶಿಕ್ಷಕಿ ಮಂಜುಳಾ ಶಾಲಾ ವರದಿ ವಾಚಿಸಿದರು.
ಶತಮಾನೋತ್ಸವ ಸಮಿತಿ ಸಂಯೋಜಕ
ನಾಮದೇವ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಅಡೂರು ಗೋಪಾಲಕೃಷ್ಣ ರಾವ್ ವರದಿ ವಾಚಿಸಿದರು. ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ಸೇವಂತಿ ವಂದಿಸಿದರು.


ನೂತನ ಕೊಠಡಿಗಳು, ರಂಗ ಮಂದಿರ, ವಿಸ್ತೃತ ಕ್ರೀಡಾಂಗಣ, ನೂತನ ಕಾಂಕ್ರೀಟ್ ರಸ್ತೆ, ನೀರಿನ ಟ್ಯಾಂಕ್, ಬಿಸಿಯೂಟದ ಕೊಠಡಿ, ಕೊಳವೆ ಬಾವಿ ಉದ್ಘಾಟನೆ, ಪೀಠೋಪಕರಣ ಹಸ್ತಾಂತರವನ್ನು ಅತಿಥಿಗಳು ನೆರವೇರಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.


“ಶಿಕ್ಷಣಕ್ಕೆ ಸರಕಾರವು ವಿಶೇಷ ಒತ್ತು ನೀಡಿದ್ದು ಅಗತ್ಯ ಮೂಲ ಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
ತಾಲೂಕಿನಲ್ಲಿ 20ನೂತನ ಅಂಗನವಾಡಿ ಕಟ್ಟಡ, ಹೈಸ್ಕೂಲ್ ಗಳಿಗೆ ಹೊಸ ಕಟ್ಟಡ, ಕಾಲೇಜುಗಳಿಗೆ ಕೊಠಡಿ, ಮೆಲಂತಬೆಟ್ಟು ಸರಕಾರಿ ಪದವಿ ಕಾಲೇಜನ್ನು 8ಕೋಟಿ ರೂ. ವೆಚ್ಚದಲ್ಲಿ, ಪುಂಜಾಲಕಟ್ಟೆ ಕಾಲೇಜನ್ನು 6ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ ಖಾಸಗಿ ಕಾಲೇಜುಗಳಂತೆ ನಿರ್ಮಿಸಲಾಗಿದೆ. ಬೆಳ್ತಂಗಡಿ ಸರಕಾರಿ ಕಾಲೇಜಿನ ಪಿ.ಯು ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ 86ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕಿನ ಹಲವಾರು ಹೊಸ ಕಾಮಗಾರಿಗಳಿಗೆ ಜನವರಿ-ಫೆಬ್ರವರಿಯಲ್ಲಿ ಶಿಲಾನ್ಯಾಸ ನಡೆಯಲಿದೆ.”

Related post

Leave a Reply

Your email address will not be published. Required fields are marked *

error: Content is protected !!