• July 27, 2024

ಯಾವುದೇ ವಿಷವನ್ನಾದರೂ ದೇಹದಿಂದ ಇಳಿಸುವ ಅಳದಂಗಡಿಯ ಧನ್ವಂತರಿ ಬೇಬಿ ಪಿಲ್ಯ

 ಯಾವುದೇ ವಿಷವನ್ನಾದರೂ ದೇಹದಿಂದ ಇಳಿಸುವ ಅಳದಂಗಡಿಯ ಧನ್ವಂತರಿ ಬೇಬಿ  ಪಿಲ್ಯ

ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಗ್ರಾಮದ ನಾಟಿ ವೈದ್ಯರಾದ ಬೇಬಿ ಪೂಜಾರಿ ನಾಟಿ ವೈದ್ಯಕೀಯದಲ್ಲಿ ಪ್ರವೀಣರಾಗಿದ್ದಾರೆ. ತನ್ನ ತಂದೆ ತಿಮ್ಮಪ್ಪ ಪೂಜಾರಿಯವರಿಂದ ಬಳುವಳಿಯಾಗಿ ಬಂದ ನಾಟಿ ವೈದ್ಯಕೀಯವನ್ನು ಮುಂದುವರಿಸಿದ ಬೇಬಿ ಸಾವಿರಾರು ಜನರ ಬಾಳನ್ನು ಬೆಳಗಿಸಿದ್ದಾರೆ.

ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಬಳಿಕ ತನ್ನ ತಂದೆಯೊಂದಿಗೆ ನಾಟಿ ವೈದ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ತಂದೆ ಕೊಡುತ್ತಿದ್ದ ಆಯುರ್ವೇದ ನಾಟಿ ಔಷಧಿಗಳನ್ನು ನೋಡುತ್ತಾ ಅನುಭವವನ್ನು ಹೆಚ್ಚಿಸಿಕೊಂಡು, ತಂದೆ ಇಲ್ಲದ ಸಮಯದಲ್ಲಿ ತಾವೇ ಔಷಧಿಯನ್ನು ಕೊಡುತ್ತಿದ್ದರು. ತಂದೆಯ ನಿಧನದ ಬಳಿಕ ನಾಟಿ ವೈದ್ಯ ಪರಂಪರೆಯನ್ನು ಮುಂದುವೆರಿಸಿದ ಬೇಬಿ ಪೂಜಾರಿಯವರು ಚರ್ಮರೋಗ, ಕೆಮ್ಮು, ಸರ್ಪಕೆಂಪು, ಸರ್ಪಸುತ್ತು, ಅಲರ್ಜಿ, ವಾತ, ಮುಟ್ಟು ದೋಷ, ಶರೀರಕ್ಕೆ ಬೆಂಕಿ ಬಿದ್ದಾಗ ಉರಿ ತೆಗೆಯುವುದು, ಹಾವು ಕಡಿತವಾದಾಗ ವಿಷ ತೆಗೆಯುವುದು ಹೀಗೆ ಹಲವಾರು ರೋಗಗಳಿಗೆ ಆಯುರ್ವೇದ ನಾಟಿ ಔಷಧಿಯನ್ನು ಕೊಡುತ್ತಿದ್ದಾರೆ.

ಸಾವಿರಾರು ಜನರ ಜೀವವನ್ನು ಬದುಕಿಸಿದ ಇವರು ಸಹಸ್ರಾರು ಗೋವುಗಳಿಗೆ ಔಷದಿಯನ್ನು ನೀಡಿ ಬದುಕಿಸಿದ್ದಾರೆ. ಅದರಲ್ಲೂ ಹಾವು ಕಚ್ಚಿದಾಗ ಜನರು ಅತೀ ಹೆಚ್ಚು ಬೇಬಿ ಅವರ ಮನೆಗೆ ಔಷಧಿಗಾಗಿ ಬರುತ್ತಾರೆ. ವರ್ಷದಲ್ಲಿ 500ಕ್ಕೂ ಅಧಿಕ ಹಾವು ಮತ್ತು ವಿಷಕಾರಿ ಹುಳ ಕಚ್ಚಿದ ರೋಗಿಗಳೇ ಇವರ ಬಳಿ ಬರೋದು ಇವರ ನಾಟಿ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಾವು ಕಡಿತವಾದ ಸಂದರ್ಭದಲ್ಲಿ ವಿಷ ತೆಗೆದರೂ ಕೆಲವರ ಕಾಲಿನಲ್ಲಿ ಗಾಯ ತೀವ್ರ ಸ್ವರೂಪ ಪಡೆದ ಸಂದರ್ಭದಲ್ಲಿ ವೈದ್ಯರು ಕಾಲನ್ನು ತೆಗೆಯಬೇಕು ಎಂದು ಹೇಳಿದ ಸಂದರ್ಭದಲ್ಲಿ ಅವರನ್ನು‌ ಮನೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿ ಆಯುರ್ವೇದ ನಾಟಿ ಔಷಧಿಯನ್ನು ನೀಡಿ ಸಾವಿರಾರು ರೋಗಿಗಳಿಗೆ ಧೈರ್ಯದ‌ ಮಾತನ್ನು ಹೇಳಿ ಅವರನ್ನು ಗುಣಪಡಿಸಿದ ಉದಾಹರಣೆಗಳಿವೆ.

ನಾಟಿ ಔಷಧಿಗೆ ಬೇಕಾದ ಗಿಡ ಮೂಲಿಕೆಗಳನ್ನು ಬೇಬಿ ಪೂಜಾರಿಯವರೇ ಕಾಡಿಗೆ ಹೋಗಿ ಆರಿಸಿಕೊಂಡು ತರುತ್ತಾರೆ. ಎಣ್ಣೆಯನ್ನು ಮತ್ತು ಲೇಪವನ್ನು ಮನೆಯಲ್ಲಿ ಗಿಡ ಮೂಲಿಕೆಗಳಿಂದ ತಯಾರು ಮಾಡುತ್ತಾರೆ. ತನ್ನ ಜಾಗದಲ್ಲಿ ನಾಟಿ ಔಷಧಿಗೆ ಬೇಕಾದ 80 ಗಿಡಗಳನ್ನು ಬೆಳೆಸಿದ್ದಾರೆ. ಯಾವ ಚಿಕಿತ್ಸೆಗೂ ಇಂತಿಷ್ಟೇ ದರ ಎಂದು ನಿಗದಿಪಡಿಸದ ಬೇಬಿ ಪೂಜಾರಿಯವರು ಇಲ್ಲಿಯವರೆಗೆ ಚಿಕಿತ್ಸೆಗೆ ಯಾರ ಬಳಿಯಿಂದಲೂ ಹಣ ಕೇಳಿದವರಲ್ಲ. ಔಷಧ ಸ್ವೀಕರಿಸಿದ ರೋಗಿ ಶಕ್ತಿಯನುಸಾರ ನೀಡಿದ ಹಣವನ್ನು ಬೇಬಿಯವರು ತೆಗೆದುಕೊಳ್ಳುತ್ತಾರೆ.

ಪಶ್ಚಿಮ ಘಟ್ಟದ ತಪ್ಪಲಿನ ಸನಿಹದಲ್ಲಿರುವ ಗ್ರಾಮ ಪಿಲ್ಯವಾಗಿದ್ದು, ಬೆಳ್ತಂಗಡಿಯಿಂದ 12 ಕಿ.ಮೀ ದೂರ, ಬೆಳ್ತಂಗಡಿ, ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಪಿಲ್ಯ ಗ್ರಾಮ ಸಿಗಲಿದೆ. ಅಲ್ಲಿ ಬೇಬಿ ಪೂಜಾರಿಯವರನ್ನು ಕಾಣಬಹುದಾಗಿದೆ.

Related post

Leave a Reply

Your email address will not be published. Required fields are marked *

error: Content is protected !!