ವೇಣೂರು: ಎಸ್ ಸಿ, ಎಸ್ ಟಿ ಕುಟುಂಬಗಳಿಗೆ ಸರಕಾರದಿಂದ ಉಚಿತ ವಿದ್ಯುತ್- ಎಇಇ ಶಿವಶಂಕರ್
ವೇಣೂರು: ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭಾಗದ ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಮಾಸಿಕ 75 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲು ಸರಕಾರ ಸೂಚಿಸಿದ್ದು, ಅರ್ಜಿ ಸಲ್ಲಿಸಬಹುದು ಎಂದು ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ಮಾಹಿತಿ ನೀಡಿದರು.
ಆರಂಬೋಡಿ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜು.16 ರಂದು ಜರುಗಿದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಬೆಳ್ತಂಗಡಿ ಉಪವಿಭಾಗದ ಮಟ್ಟದ ವಿದ್ಯುತ್ ಅದಾಲತ್ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.
ಅರ್ಹ ಫಲಾನುಭವಿಗಳು ವಿದ್ಯುತ್ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಅನಂತರ ಸಬ್ಸಿಡಿ ರೂಪದಲ್ಲಿ ನೇರವಾಗಿ ಗ್ರಾಹಕರ ಖಾತೆಗಳಿಗೆ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಇಂಧನ ಇಲಾಖೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆಯ ದಾಖಲೆಯನ್ನು ಅರ್ಜಿಯೊಂದಿಗೆ ಒದಗಿಸಬೇಕಾಗುತ್ತದೆ ಎಂದರು.
ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ತಾಲೂಕಿಗೆ 530 ವಿದ್ಯುತ್ ಪರಿವರ್ತಕಗಳನ್ನು ಶಾಸಕರು ಕಲ್ಪಿಸಿದ್ದು, ಶೀಘ್ರವೇ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಹನ್ನೆರಡುಕವಲು ಬಳಿ ವರ್ಷ ಕಳೆದರೂ ಟಿ.ಸಿ.ಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಬಗ್ಗೆ ಹಾಗೂ ಗ್ರಾಮದ ವಿವಿಧ ಭಾಗಗಳಲ್ಲಿ ಹಳೆ ತಂತಿ ಬದಲಾವಣೆ ಹಾಗೂ ಹೆಚ್ಚುವರಿ ವಿದ್ಯುತ್ ಕಂಬ ಅಳವಡಿಕೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ವೇಣೂರು ಶಾಖೆಯ ನೂತನ ಶಾಖಾಧಿಕಾರಿ ಗಣೇಶ್ ನಾಯ್ಕ್ , ಪಂ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರ್ಗಮಿತ ಪ್ರಭಾರ ಶಾಖಾಧಿಕಾರಿ ಬೂಬ ಶೆಟ್ಟಿ ಸ್ವಾಗತಿಸಿ, ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಭೆಯನ್ನು ನಿರ್ವಹಿಸಿದರು.