ವೇಣೂರು ಮಸ್ತಕಾಭಿಷೇಕ: ಹೂವಿನಾಲಂಕಾರದಲ್ಲಿ ಗಮನಸೆಳೆದ ಫಕೀರಬ್ಬ ಮಾಸ್ಟರ್
ಬೆಳ್ತಂಗಡಿ; ವೇಣೂರಿನ ಬಾಹುಬಲಿ ಸ್ವಾಮಿಗೆ ನಡೆದ ಈ ಶತಮಾನದ 3 ನೇ ಮಹಾ ಮಸ್ತಕಾಭಿಷೇಕ ಮಹೋತ್ಸವದಲ್ಲಿ ಹೂವಿನ ಅಲಂಕಾರದಲ್ಲಿ ಮಾಸ್ಟರ್ ಫ್ಲವರ್ಸ್ ಮಂಗಳೂರು ಇದರ ಮಾಲಿಕ ಫಕೀರಬ್ಬ ಮಾಸ್ಟರ್ ಅವರು ವಿಶೇಷ ಗಮನಸೆಳೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರಾದ ಫಕೀರಬ್ಬ ಮಾಸ್ಟರ್ ಅವರು ಮಂಗಳೂರಿನ ಪ್ರಖ್ಯಾತ ಮಾಸ್ಟರ್ ಫ್ಲವರ್ಸ್ ನ ಮಾಲಕರಾಗಿದ್ದು, ವೇಣೂರು ಮಹಾ ಮಸ್ತಕಾಭಿಷೇಕದ ಎಲ್ಲಾ ದಿನಗಳಲ್ಲೂ ಹೂವಿನ ಅಲಂಕಾರದ ವ್ಯವಸ್ಥೆಯನ್ನು ವಹಿಸಿಕೊಂಡಿದ್ದರು.
ಆ ಮೂಲಕ ಅವರ ತಂಡ ಮಸ್ತಕಾಭಿಷೇಕದ ಎಲ್ಲಾ 8 ದಿನಗಳಲ್ಲಿ ಬಾಹುಬಲಿ ಸನ್ನಿಧಾನ ಮತ್ತು ಇತರೆಡೆ ಅತ್ಯುತ್ತಮವಾದ ಹೂವಿನ ಅಲಂಕಾರ ಕೈ ಗೊಳ್ಳುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಜಿನ ಭಕ್ತರ ವಿಶೇಷ ಗಮನ ಸೆಳೆದಿದ್ದಾರೆ.
ಹಿಂದೆ ಧರ್ಮಸ್ಥಳದಲ್ಲಿ ನಡೆದ ಮಸ್ತಕಾಭಿಷೇಕ ಸಂದರ್ಭದಲ್ಲೂ ಇದೇ ಫಕೀರಬ್ಬ ಮಾಸ್ಟರ್ ಅವರು ಹೂವಿನ ಅಲಂಕಾರದ ಸರ್ವ ಜವಾಬ್ದಾರಿ ವಹಿಸಿಕೊಂಡು ಅಲ್ಲೂ ಯಶಸ್ವಿಯಾಗಿದ್ದರು. ಶ್ರವಣಬೆಳಗೊಳ, ಕಾರ್ಕಳದಲ್ಲೂ ತಮ್ಮ ಹೂವಿನ ಅಲಂಕಾರದ ಮೂಲಕ ಜನಪ್ರಿಯರಾಗಿದ್ದ ಒಟ್ಟು ನಾಲ್ಕುಕಡೆಗಳಲ್ಲು ಹೂವಿನ ಅಲಂಕಾರ ನಡಸಿ ಪ್ರಸಿದ್ಧಿ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಕೀರಬ್ಬ ಮಾಸ್ಟರ್ ಮರೋಡಿ ಅವರು, ವೇಣೂರಿನ ಮಹಾ ಮಸ್ತಕಾಭಿಷೇಕದಲ್ಲಿ ಮುಸಲ್ಮಾನರೂ ಸೇರಿದಂತೆ ನಾಡಿನ ಸರ್ವಧರ್ಮೀಯರೂ ಸಂತಸದಿಂದ ಪಾಲ್ಗೊಂಡಿದ್ದಾರೆ. ಎಲ್ಲ ವರ್ಗದ ಜನರಿಗೂ ವ್ಯಾಪಾರ ಮಳಿಗೆಗಳಿಗೆ ಅವಕಾಶ ನೀಡಲಾಗಿತ್ತು. ಆದ್ದರಿಂದ ಮಸ್ತಕಾಭಿಷೇಕ ಸಮಿತಿ ಎಲ್ಲ ರೀತಿಯಿಂದಲೂ ಅಭಿನಂದನೆಗೆ ಅರ್ಹವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.