ಬದುಕು ಕಟ್ಟೋಣ ಬನ್ನಿ ತಂಡದಿಂದ ಗೋವಿಗಾಗಿ ಮೇವು ನೇಜಿ ನಾಟಿ ಕಾರ್ಯಕ್ರಮ
ಉಜಿರೆ: ಪ್ರಕೃತಿ, ಕೃಷಿ, ಗ್ರಾಮೀಣ ಬದುಕು ಅಭಿವೃದ್ಧಿಗೆ ಅನಿವಾರ್ಯ. ಇದರಿಂದ ಬದುಕಲ್ಲಿ ನೆಮ್ಮದಿ,ಸುಖ,ಶಾಂತಿ ಕಂಡುಕೊಳ್ಳಬಹುದು. ಕೊರೊನಾ ಕಾಲಘಟ್ಟದಲ್ಲಿ ಕೃಷಿ ಬದುಕಿಗೆ ಎಷ್ಟು ಮಹತ್ವವಿದೆ ಎಂಬ ಅರಿವು ಎಲ್ಲರಲ್ಲು ಮೂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ನ.13 ರಂದು ಉಜಿರೆ ಬದುಕು ಕಟ್ಟೋಣ ತಂಡ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಉಜಿರೆಯ ಪಡುವೆಟ್ಟು ಬೈಲಿನ ಸುಮಾರು 5 ಎಕರೆ ಪ್ರದೇಶದ ಗದ್ದೆಯಲ್ಲಿ ಗೋವಿಗಾಗಿ ಮೇವು ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕ,ಸಾಮಾಜಿಕ, ಆರ್ಥಿಕ,ಶೈಕ್ಷಣಿಕವಾಗಿ ಹಲವು ಕಾರ್ಯಗಳನ್ನು ನೆರವೇರಿಸುತ್ತಿರುವ ಬದುಕು ಕಟ್ಟೋಣ ಬನ್ನಿ ತಂಡ ಅನೇಕ ಕುಟುಂಬಗಳಿಗೆ ದಾರಿದೀಪವಾಗಿದೆ. ಅವರು ನಡೆಸುತ್ತಿರುವ ಅದ್ಭುತ ಚಿಂತನೆಯ ಕೆಲಸಗಳು ರಾಜ್ಯವೇ ಗುರುತಿಸುವಂತಾಗಿದೆ. ತಂಡದ ಜನಸೇವೆಯ ತುಡಿತ ಇನ್ನಷ್ಟು ಹೆಚ್ಚಲಿ ಎಂದರು.
ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅವಕಾಶವನ್ನು ಸೃಷ್ಟಿಸುವವರು ಬೇಕು. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡರೆ ಸಾಧನೆ ಸಾಧ್ಯ ಎಂದರು.
ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಜೀವನ ಸಂಸ್ಕೃತಿಗೂ ಕೃಷಿ ಕಾರ್ಯಗಳು ಜತೆ ಸಂಬಂಧವಿದೆ. ಹಿರಿಯರು ಇದರ ಮಹತ್ವ ತ,ಅರಿತು ಅನೇಕ ಪದ್ಧತಿಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಮಾತನಾಡಿ, ಕೃಷಿ ಸಂಸ್ಕೃತಿ,ಆಹಾರ ಪದ್ಧತಿ,ಭಾಷೆ ಕಳೆದುಕೊಂಡರೆ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ.ಳ ಸಂಸ್ಕೃತಿ ಉಳಿಸುವ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದರು.
ಶ್ರೀ ಧರ್ಮಸ್ಥಳ ಕೃಷಿ ವಿಭಾಗದ ವ್ಯವಸ್ಥಾಪಕರಾದ ಬಾಲಕೃಷ್ಣ ಪೂಜಾರಿ, ಎಸ್.ಡಿ.ಎಂ. ಉಪನ್ಯಾಸಕ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.
ಉಜಿರೆ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯ ಅವರನ್ನು ಗೌರವಿಸಲಾಯಿತು.
ಉದ್ಯಮಿ ಹರೀಶ್ ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಸಿದರು.ಇನ್ನೋರ್ವ ಸಂಚಾಲಕ ರಾಜೇಶ್ ಪೈ ವಂದಿಸಿದರು.
ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.