• July 25, 2024

ಸಮಾಜಸೇವೆಯ ಕ್ಷೇತ್ರದಲ್ಲಿ ” ಬದುಕು ಕಟ್ಟೋಣ ಬನ್ನಿ” ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

 ಸಮಾಜಸೇವೆಯ ಕ್ಷೇತ್ರದಲ್ಲಿ ” ಬದುಕು ಕಟ್ಟೋಣ ಬನ್ನಿ” ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಉಜಿರೆ: ಸಮಾಜ ಸೇವೆ ಕ್ಷೇತ್ರದಲ್ಲಿ ಉಜಿರೆಯ ” ಬದುಕು ಕಟ್ಟೋಣ ಬನ್ನಿ” ತಂಡವನ್ನು ಜಿಲ್ಲಾಡಳಿತದ 2022-2023 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇನ್ನೂರಕ್ಕಿಂತಲು ಅಧಿಕ ಕಾರ್ಯಕರ್ತರನ್ನು ಒಳಗೊಂಡ ಬದುಕುಕಟ್ಟೋಣ ಬನ್ನಿ ತಂಡವು ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ಅವರ ನೇತೃತ್ವದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಸಂತ್ರಸ್ತರ ಪಾಲಿಗೆ ಬೆಳಕಾಗದ ಬದುಕು ಕಟ್ಟೋಣ ಬನ್ನಿ ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.

ಅಕ್ಕ-ತಂಗಿಯರ ಬಾಳಿಗೆ ಬೆಳಕಾದ “ಬದುಕು ಕಟ್ಟೋಣ ಬನ್ನಿ” ತಂಡ

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಕ್ಷಯನಗರದ ಸದಾಶಿವ ಮತ್ತು ರೇಖಾ ದಂಪತಿಗಳ ಮಕ್ಕಳಾದ 8ನೆ ತರಗತಿಯ ಸ್ನೇಹ ಮತ್ತು 6ನೆ ತರಗತಿ‌ ದೀಪ ಶ್ರೀ ಇವರು ಕಲ್ಮಂಜ ಸರಕಾರಿ ಶಾಲೆಯಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದು ಈ ಮಕ್ಕಳಿಗೆ ಫೋಷಕರಿಲ್ಲದೆ ಪೋಷಣೆಯನ್ನು ಮಾವ ಆಟೋ ಚಾಲಕರಾಗಿರುವ ಪ್ರವೀಣ್ ನೋಡಿಕೊಳ್ಳುತ್ತಿದ್ದು ಇದನ್ನು ಮನಗಂಡ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಸೆಪ್ಟೆಂಬರ್ 18 ರಂದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿತ್ತು.

ಈ ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ “ಶಿಕ್ಷಣ ದೀವಿಗೆ” ಹಾಗೂ ಮನೆ ನಿರ್ಮಿಸಿಕೊಡುವ “ಸೇವೆ ನಮ್ಮದು ಬದುಕು ನಿಮ್ಮದು” ಎಂಬ ಭರವಸೆಯ ಕಾರ್ಯಕ್ರಮ ನಡೆಸಲಾಯಿತು.

ವಾಸಕ್ಕೆ ಯೋಗ್ಯವಲ್ಲದ ಮನೆಯಾಗಿದ್ದು ಇವರಿಗಾಗಿ ನೂತನ ಮನೆ ಮತ್ತು ವಿದ್ಯಾಭ್ಯಾಸದ ಪೂರ್ಣ ಖರ್ಚು ವೆಚ್ಚಗಳನ್ನು ಗೆಳೆಯರ ಬಳಗ ಅಕ್ಷಯ ನಗರ ,ಸತ್ಯನಾರಾಯಣ ಭಜನಾ ಮಂಡಲಿ‌ ನಿಡಿಗಲ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಹಾಗೂ ಊರವರ ಸಮ್ಮುಖದಲ್ಲಿ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಯಿತು‌.

ನೆರೆ ಸಂತ್ರಸ್ತರ ಬದುಕು ಕಟ್ಟಿದ ‘ಬದುಕು ಕಟ್ಟೋಣ ಟೀಂ’: ಬೆಳ್ತಂಗಡಿಯಲ್ಲಿ 12 ಮನೆ ಗೃಹ ಪ್ರವೇಶ

ಬೆಳ್ತಂಗಡಿ: 2019ರ ಆ.9 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿ‌ನ ಜನರಿಗೆ ಎಂದೂ ಮರೆಯದ ದಿನ. ದಿಢೀರನೆ ಅಪ್ಪಳಿಸಿದ ಪ್ರವಾಹ ಬೆಳ್ತಂಗಡಿಯ ಹಲವು ಗ್ರಾಮಗಳನ್ಮ ಮುಳುಗಿಸಿ ಬಿಟ್ಟಿತ್ತು.‌ ಶಾಂತವಾಗಿ ಹರೀತಾ ಇದ್ದ ನದಿಗಳು ಅಬ್ಬರಿಸಿದ ಪರಿಣಾಮ ನೂರಾರು ಜನರ ಬದುಕು ನೀರು ಪಾಲಾಯ್ತು. ಯಾವ ಸಾಕ್ಷ್ಯಗಳೂ ಉಳಿಯದಂತೆ ಅಕ್ಷರಶಃ ನರಕವಾಗಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ ಪ್ರವಾಹದ ಮೂರು ವರ್ಷದ ಬಳಿಕ ಪವಾಡವೊಂದು ನಡೆದಿದೆ. ಮನೆ, ಕೃಷಿ ಭೂಮಿ ಕಳೆದುಕೊಂಡು ಅನಾಥವಾಗಿದ್ದ ಜನರ ಬದುಕನ್ನ ಮತ್ತೆ ಆ ಯುವಕರ ತಂಡ ಕಟ್ಟಿ ಕೊಟ್ಟಿದೆ. ಬೆಳ್ತಂಗಡಿಯ ಉಜಿರೆಯ ‘ಬದುಕು ಕಟ್ಟೋಣ’ ತಂಡ ಪ್ರವಾಹಕ್ಕೆ ತತ್ತರಿಸಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ 12 ಮನೆಗಳನ್ನ ಮತ್ತೆ ನಿರ್ಮಿಸಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಿದೆ.

ನೆರೆಗೆ ತತ್ತರಿಸಿದ್ದ ಕೊಳಂಬೆ ಗ್ರಾಮ ಮತ್ತೆ ಹೊಸತಾಗಿ ಎದ್ದು ನಿಂತಿದೆ.

‘ಬದುಕು ಕಟ್ಟೋಣ’ ತಂಡದ ಮಾನವೀಯ ಕಾರ್ಯ

2019ರ ಆ.9 ರ ಭೀಕರ ಪ್ರವಾಹಕ್ಕೆ ಮೃತ್ಯುಂಜಯ ನದಿ ಉಕ್ಕಿ ಹರಿದ ಪರಿಣಾಮ ಚಾರ್ಮಾಡಿ ಕೊಳಂಬೆಯ ಕೆಲ ಮನೆಗಳನ್ನು ಸಂಪೂರ್ಣ ಜಲಸಮಾಧಿ ಮಾಡಿತ್ತು. ಅಕ್ಕಪಕ್ಕದ 20 ಮನೆಗಳು ಮರಳು ದಿಬ್ಬದೊಳಕ್ಕೆ ಹುದುಗಿದ್ದವು. ಕೃಷಿ ಭೂಮಿ ಮರಳು ಭೂಮಿಯಂತೆ ಕಾಣುತ್ತಿತ್ತು. ಕೊಳಂಬೆ ನಿವಾಸಿಗಳು ಊರೇ ಬಿಟ್ಟು ಹೋಗಿವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಉಜಿರೆಯ ಬದುಕು ಕಟ್ಟೋಣ ತಂಡ ಕೊಳಂಬೆಯನ್ನು‌ ಮತ್ತೆ ಕಟ್ಟುವ ಕಾರ್ಯಕ್ಕೆ ಮುನ್ನುಡಿ ಬರೆಯಿತು. ಉಜಿರೆಯ ಉದ್ಯಮಿಗಳಾದ ಮೋಹನ್‌ ಕುಮಾರ್‌ ಹಾಗೂ ರಾಜೇಶ್‌ ಪೈ ನೇತೃತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಮರಳು ತೆರವುಗೊಳಿಸಿ 20ಕ್ಕೂ ಅಧಿಕ ಕುಟುಂಬಗಳ ಬದುಕು ಕಟ್ಟಲು ಹೆಗಲು ಕೊಟ್ಟು ನಿಂತಿತು. ಈ ಪರಿವರ್ತನೆಗೆ ವಿದ್ಯಾರ್ಥಿಗಳು, ಸಂಘ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಸೇರಿ 5,000ಕ್ಕೂ ಅಧಿಕ ಮಂದಿ ಶ್ರಮದಾನದ ಮೂಲಕ ನೆರವಿಗೆ ನಿಂತರು. ಕೊನೆಗೆ ಕೊಳಂಬೆಯಲ್ಲಿ ಸಂಪೂರ್ಣ ನಾಶವಾಗಿದ್ದ 12 ಮನೆಗಳನ್ನು ಗುರುತಿಸಿ ಕಂದಾಯ ಇಲಾಖೆ ನೀಡಿದ ವರದಿಯನುಸಾರ ಬದುಕು ಕಟ್ಟೋಣ ಟೀಂ ಫೀಲ್ಡಿಗಿಳಿಯಿತು. ಬದುಕು ಕಟ್ಟೋಣ ತಂಡ ಎರಡು ವರ್ಷಗಳಿಂದ 20 ಮನೆಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಸಹಕಾರದೊಂದಿಗೆ ದಾನಿ ಗಳ ಸಹಕಾರದಿಂದ ನೆರವು ಪಡೆಯಿತು. ಕೊಳಂಬೆಯಲ್ಲಿ 20 ಕುಟುಂಬದ ಒಟ್ಟು 40 ಎಕ್ರೆ ಸ್ಥಳವಿದ್ದು, ಎರಡು ವರ್ಷಗಳಲ್ಲಿ ಸಂಪೂರ್ಣ ಕೃಷಿ ಚಟುವಟಿಕೆ ಮರುಸ್ಥಾಪನೆ ಮಾಡಲಾಗಿದೆ. ಸುಮಾರು 5 ಎಕ್ರೆಯಷ್ಟು ವಿಸ್ತಾರದ ಗದ್ದೆಯ ಮರಳು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂ. ಘೋಷಣೆ ಮಾಡಿದ್ದರು. 12 ಮನೆಗಳಿಗೆ ಸರಕಾರದಿಂದ ಬಂದ ತಲಾ 5 ಲಕ್ಷ ರೂ., ಶಾಸಕ ಹರೀಶ್‌ ಪೂಂಜ ಅವರ ಕಾಳಜಿ ಫಂಡ್‌ ರಿಲೀಫ್‌ ಫಂಡ್‌ ನಿಂದ ತಲಾ 1 ಲಕ್ಷ ರೂ., ಫಲಾನುಭವಿಗಳಿಂದ ತಲಾ 2 ಲಕ್ಷ ರೂ., ಉಳಿದ ಮೊತ್ತವನ್ನು ಬದುಕು ಕಟ್ಟೋಣ ತಂಡವೇ ಭರಿಸಿ ತಲಾ 13.50 ಲಕ್ಷ ರೂ. ನಲ್ಲಿ ಪ್ರತೀ ಮನೆ ನಿರ್ಮಿಸಲಾಗಿದೆ. ವಾಸ್ತು ಪ್ರಕಾರವೇ ಅಚ್ಚುಕಟ್ಟಾಗಿ ಮನೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ನೆರೆ ಸಂಭವಿಸಿದರೂ ಹಾನಿಯಾಗದಂತೆ ಎಂಜಿನಿಯರ್‌ ಮಾರ್ಗದರ್ಶನದಲ್ಲಿ ಕಾಂಕ್ರಿಟ್‌ ಪಿಲ್ಲರ್‌ ಅಳವಡಿಸಿ ಅಡಿಪಾಯ ನಿರ್ಮಿಸಲಾಗಿದೆ.

ಸಂತ್ರಸ್ತರಿಗೆ ಅಕ್ಕಿ ಕೊಡಲು ಹೋದವರು ಬದುಕು ಕೊಟ್ಟರು!

2019ರಲ್ಲಿ ನೆರೆ ಬಂದು ಬೆಳ್ತಂಗಡಿ ಮುಳುಗಿ ಹೋಗಿದ್ದ ಹೊತ್ತಲ್ಲಿ ಮಳೆ ನಿಂತ ಮೇಲೆ ಆ ಗ್ರಾಮದ ಜನರಿಗೆ ಆಹಾರ, ಅಕ್ಕಿ ಅಂತ ಒಂದಷ್ಟು ಪರಿಹಾರ ಒದಗಿ ಬಂದಿತ್ತು. ಅದೇ ಹೊತ್ತಲ್ಲಿ ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ಅವರ ಮಿತ್ರ ರಾಜೇಶ್ ಪೈ ಅವರು ಎಲ್ಲರಂತೆ ಘಟನಾ ಸ್ಥಳ ವೀಕ್ಷಣೆಗೆ ಹೋಗಿದ್ದರು. ಹೊರಡುವಾಗ ಅಲ್ಲಿನ‌ ಸಂಕಷ್ಟ ಪೀಡಿತರಿಗೆ ತಲಾ 50 ಕೆ.ಜಿ ಅಕ್ಕಿ ಕೊಡಬೇಕೆಂದು ಅಂದುಕೊಂಡಿದ್ದರಂತೆ. ಆದರೆ ಅಲ್ಲಿ ಹೋಗಿ ನೋಡುವಾಗ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿತ್ತು. ಕೆಸರು ತುಂಬಿದ ಅಲ್ಲಿನ ಭೂಮಿಯಲ್ಲಿ ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಇಡಲು ಜಾಗ ಇರಲಿಲ್ಲ. ಕೆಲವರ ವಾಸದ ಮನೆ ಕುಸಿದುಹೋಗಿದ್ದರೆ ಇನ್ನೂ ಕೆಲವು ಭಾಗಶಃ ಹಾನಿಯಾಗಿದ್ದವು.

ಉಳಿದ ಕೆಲವು ಮನೆಗಳು, ‌ಕುಡಿಯುವ ನೀರಿನ ಬಾವಿ ಸಂಪೂರ್ಣ ಕೆಸರುಮಯವಾಗಿ ಬದುಕೇ ಅಸಾಧ್ಯ ಎಂಬಂತಿತ್ತು. ಅಲ್ಲಿನ ಜನ ನಾವು ಇಲ್ಲಿ ಇನ್ನು ವಾಸಿಸುವುದಿಲ್ಲ. ನಮಗೆ ಐದು ಸೆಂಟ್ಸ್ ಭೂಮಿ ಎಲ್ಲಾದರೂ ತೆಗೆಸಿಕೊಡಿ ಎಂದು ಗೋಗರೆದಿದ್ದರು. ಅದನ್ನೆಲ್ಲ ನೋಡಿ ಅಂದೇ ಆ ಪ್ರದೇಶಕ್ಕೆ ಏನಾದರೊಂದು ಸೇವೆ ಮಾಡಬೇಕೆಂದು ಸಂಕಲ್ಪಿಸಿ ಹೆಜ್ಜೆ ಇಟ್ಟವರು ಎರಡೂವರೆ ವರ್ಷದಲ್ಲಿ ಇಂದು ಈ ಮಟ್ಟಕ್ಕೆ ಅವರ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದಾರೆ. ಅದರ ಫಲವಾಗಿ ಹುಟ್ಟಿಕೊಂಡ ಬದುಕು ಕಟ್ಟೋಣ ತಂಡ ಇಂದು ಅಕ್ಷರಶಃ ಕ್ರಾಂತಿ‌ ಮಾಡಿದೆ. ಇವರ ಸಮಾಜ ಸೇವೆಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯಲು ಆಯ್ಕೆಯಾಗಿದೆ.

ಇತ್ತೀಚೆಗೆ ಅಕ್ಕ ತಂಗಿಯರ ಬಾಳಿಗೆ ಬೆಳಕಾದ ಬದುಕು ಕಟ್ಟೋಣ ಬನ್ನಿ ತಂಡ ಬೆಳ್ತಂಗಡಿ ತಾಲೂಕಿಗೆ ಪ್ರಶಂಸೆಗೆ ಪಾತ್ರವಾಗಿದೆ

Related post

Leave a Reply

Your email address will not be published. Required fields are marked *

error: Content is protected !!