ನಡೆಯಲು ಅಸಾಧ್ಯವಾಗಿದ್ದ ಕೇಶವ ಎಂಬವರಿಗೆ ಸೇವಾ ಯೋಜನೆಯ ರೂಪದಲ್ಲಿ ವೀಲ್ ಚೇರ್ ನೀಡಿದ ಕಲಾತಪಸ್ವಿ ಸಾಂಸ್ಕೃತಿಕ ತಂಡ
ವಿಟ್ಲ :ಕಳೆದ ಒಂದು ವರ್ಷದ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲ, ಪ್ರೋತ್ಸಾಹ ದೊಂದಿಗೆ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿರುವ ಯುವತಂಡ.
ಕೇವಲ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದು ಮಾತ್ರವಲ್ಲದೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತ, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ನಿಟ್ಟಿನಲ್ಲಿ ಸೇವಾಯೋಜನೆಗಳನ್ನು ನಡೆಸುತ್ತ ಕರಾವಳಿ ಕರ್ನಾಟಕದಾದ್ಯಂತ ಜನಪ್ರಿಯತೆಯನ್ನುಗಳಿಸಿಕೊಂಡತಹ ಹಿರಿಮೆ ಕಲಾತಪಸ್ವಿ ತಂಡಕ್ಕೆ ಸಲ್ಲುತ್ತದೆ.
ಕಳೆದ ಕೆಲವು ವರ್ಷಗಳ ಹಿಂದೆ ಬಾವಿಗೆ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಕೇಶವ ಎನ್ನುವವರಿಗೆ ಒಂದು ವೀಲ್ ಚೇರ್ ನ ಅವಶ್ಯಕತೆ ಇತ್ತು.ಹಾಗೆಯೇ ಕೇಶವರ ನಿತ್ಯಕರ್ಮದ ಎಲ್ಲಾ ಕೆಲಸಗಳು ಅದೇ ವೀಲ್ ಚೇರ್ ಮೂಲಕ ಆಗಬೇಕಾಗಿತ್ತು.ಹಿಂದೆ ಒಂದು ವೀಲ್ ಚೇರ್ ಇತ್ತಾದರೂ ಅದು ಇದೀಗ ಉಪಯೋಗಕ್ಕೆ ಬರುತ್ತಿರಲಿಲ್ಲ. ಕೇಶವರಿಗೆ ಹೆಂಡತಿ,ಮೂರು ಜನ ಹೆಣ್ಣು ಮಕ್ಕಳೇ ಆಧಾರವಾಗಿರುತ್ತಾರೆ. ಬಾಡಿಗೆ ಮನೆಯೊಂದರಲ್ಲಿ ಈ ಕುಟುಂಬ ವಾಸವಾಗಿತ್ತು. ಇದನ್ನು ಮನಗಂಡ ಕಲಾತಪಸ್ವಿ ಸಾಂಸ್ಕೃತಿಕ ತಂಡ ಕೇಶವರಿಗೆ ನೆರವಾಗುವ ನಿಟ್ಟಿನಲ್ಲಿ ಸೇವಾಯೋಜನೆಯ ರೂಪದಲ್ಲಿ ವೀಲ್ ಚೇರ್ ಒಂದನ್ನು ನೀಡಬೇಕೆಂದು ನಿರ್ಧರಿಸಿ ಕಲಾತಪಸ್ವಿ ತಂಡದ ಸದಸ್ಯರ, ಬೆಂಬಲಿಗರ ವಾಟ್ಸಪ್ ಗ್ರೂಪ್ನಲ್ಲಿ ಈ ವಿಷಯವನ್ನು ಹಂಚಿಕೊಂಡಿತ್ತು.
ಇದರ ಫಲವಾಗಿ ಅನೇಕ ಸಹೃದಯಿ ದಾನಿಗಳಿಂದ ಸೇವಾಯೋಜನೆಗೆ ನೆರವು ಬಂದಿತ್ತು. ನಂತರ ಬಂದ ಸಹಾಯಧನದಿಂದ ಒಟ್ಟು ರೂ.16,800 ಬೆಲೆ ಬಾಳುವ ಹಾಗೂ ಕೇಶವರಿಗೆ ಅಗತ್ಯವಿದ್ದ ವೀಲ್ ಚೇರ್ ಅನ್ನು ಖರೀದಿಸಿ ಶತಕೋಟಿ ಹಿಂದೂಗಳ ಕನಸು ನನಸಾಗುವ ದಿನ,
ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನವಾಗುವ ಸುದಿನವಾದ 22-01-2024ರಂದು ಫಲಾನುಭವಿಗಳ ಮನೆಯಲ್ಲಿ ವೀಲ್ ಚೇರ್ ಅನ್ನು ವಿತರಿಸಲಾಯಿತು.
ಈ ಮೂಲಕ ಒಂದು ವರ್ಷದಲ್ಲಿ ಮೂರು ಜನ ಫಲಾನುಭವಿಗಳಿಗೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಮೊತ್ತದ ಸೇವಾನಿಧಿಯನ್ನು ಸಹೃದಯಿದಾನಿಗಳ ನೆರವಿನಿಂದ ನೀಡಲು ಸಾಧ್ಯವಾಗಿದೆ.
ಈ ಸಂಧರ್ಭದಲ್ಲಿ ಇಡ್ಕಿದು ಸೇವಾಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು, ಸಾನ್ವಿ ಕನ್ಸ್ಟ್ರಕ್ಷನ್ ಇದರ ಮಾಲಕರಾದ ತಾರಾನಾಥ್ ಬೋಳಿಗದ್ದೆ, ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಗೌರವಾಧ್ಯಕ್ಷರಾದ ಜನಾರ್ಧನ ಪೂಜಾರಿ ಕಾರ್ಯಡಿ, ಕಲಾತಪಸ್ವಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ಸದಸ್ಯರಾದ ಧನರಾಜ್ ಅಮೈ,ಜಗದೀಶ ನೂಜಿ, ಅಕ್ಷಯ್ ಅರ್ಕೆಚ್ಚಾರು,ಜೀವನ್ ಅಮೈ,ವಜ್ರೇಶ್ ಧರ್ಮನಗರ ಹಾಗೂ ಕೇಶವರ ಮನೆಯವರು ಉಪಸ್ಥಿತರಿದ್ದರು.