• July 16, 2024

ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಹೊಸ ಹೆಜ್ಜೆ: ಉಜಿರೆ ಮುಂಡತ್ತೋಡಿ ಸರಕಾರಿ ಶಾಲೆ ಅಭಿವೃದ್ಧಿ ಪರ್ವಕ್ಕೆ ಚಾಲನೆ

 ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಹೊಸ ಹೆಜ್ಜೆ: ಉಜಿರೆ ಮುಂಡತ್ತೋಡಿ ಸರಕಾರಿ ಶಾಲೆ ಅಭಿವೃದ್ಧಿ ಪರ್ವಕ್ಕೆ ಚಾಲನೆ

ಬೆಳ್ತಂಗಡ: ಜು.17: ಶಿಕ್ಷಣ ಎಂಬ ದಾರಿದೀವಿಗೆ ಎಲ್ಲ ಮಕ್ಕಳಿಗೂ ದಕ್ಕಿದಾಗ ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ತಾರತಮ್ಯ ದೂರವಾಗಲು ಸಾಧ್ಯ. ಶೈಕ್ಷಣಿಕ ಕ್ರಾಂತಿ ಬಡತನ ಬೇಗೆಯಿಂದ ಹೊರಬರಲು ಮೂಲ ಕಾರಣ ಎಂಬುದನ್ನರಿತು ದಾನಿಗಳ ನೆರವಿನಿಂದ ಹಮ್ಮಿಕೊಂಡ ಕಾರ್ಯಕ್ರಮ ಶಿಕ್ಷಣ ಮೌಲ್ಯದ ಗರಿಮೆ ಹೆಚ್ಚಿಸಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ವಿ.ಮನೋರಮಾ ಭಟ್ ಹೇಳಿದರು.

ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ ರೋಟರಿ ಕ್ಲಬ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ‘ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ’ ಧ್ಯೇಯದಡಿ ಉಜಿರೆ ಗ್ರಾಮದ ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಪರ್ವಕ್ಕೆ ಜು.17 ರಂದು ಶಾಲಾವಠಾರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ದಾನಿಗಳು ಅರ್ಪಿಸುವ ಸಹಾಯದನ ಊರುಗೋಲು ಆಗಬಹುದು, ಆದರೆ ಶಾಲೆಯ ಅಭಿವೃದ್ಧಿಯಲ್ಲಿ ಮಕ್ಕಳ ಪೋಷಕರ ಸಹಭಾಗಿತ್ವ ಅತ್ಯವಶ್ಯ. ಬದುಕು ಕಟ್ಟೋಣ ತಂಡ ಸಮಾಜದ ಅನೇಕರಿಗೆ ನೈಜ ರೀತಿಯಲ್ಲಿ ಬದುಕು ಕಲ್ಪಿಸುವ ಕಾರ್ಯ ಮಾಡಿದೆ. ಇದೀಗ ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡಿರುವ ಕೆಲಸ ಅಭಿನಂದನೀಯ. ಈ ಮೂಲಕ ಶಿಕ್ಷಣದ ಮಹತ್ವ ಹಿಂದಿಗಿಂತಲೂ ಈಗ ಹೆಚ್ಚಿದಂತಾಗಿದೆ. ಶಾಲೆಯ ಈ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳು ತೊಡಗಿಸಿಕೊಂಡು ಸುಂದರ ಶಾಲೆಯ ಕನಸು ನನಸಾಗಲಿ ಎಂದು ಹಾರೈಸಿದರು‌.

ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ. ಶಿರ್ಲಾಲು ಮಾತನಾಡಿ, ಸಮಾಜದಲ್ಲಿ ಪರಿವರ್ತನೆ ಎಂಬುದು ಸಹಭಾಗಿತ್ವದಲ್ಲಿ ಕೂಡಿದೆ. ಎಲ್ಲರೂ ಒಟ್ಟುಗೂಡಿದಾಗ ಪರಿವರ್ತನೆ ಸಾಧ್ಯ‌. ಶಾಲೆಯ ಬೆಳವಣಿಗೆಗೆ ನೆರವಾಗುವುದು ರಾಷ್ಟ್ರ ಮೆಚ್ಚುವ ಕಾರ್ಯ. ಪತ್ರಕರ್ತರು ಉತ್ತಮ ಕಾರ್ಯಕ್ಕೆ ಪ್ರಚಾರ ನೀಡುವುದು ಮಾತ್ರವಲ್ಲದೆ ಅಭಿವೃದ್ಧಿಗೂ ನೆರವಾಗುವ ಅರ್ಥಪೂರ್ಣ ಕೆಲಸವಾಗಲಿದೆ ಎಂದು ಹೇಳಿದರು.

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಕಲಿಕಾ ಸಂದರ್ಭದಲ್ಲಿ ಶಿಕ್ಷಣದ ಜತೆಗೆ ಪೂರಕ ಯೋಜನೆಗಳು ಬೇಕು ಎಂಬ ಮೂಲ ಆಶಯದೊಂದಿಗೆ ‘ನಮ್ಮೂರ ಕನ್ನಡ ಶಾಲೆ ನಮ್ಮೂರ ಹೆಮ್ಮೆ’ ಎಂದು ಹೆಸರಿಟ್ಟು ನಮ್ಮೂರ ಶಾಲೆ ಕಲ್ಪನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಚಿಂತನೆಯಾಗಿದೆ‌. ಸರಕಾರದ ಸೌಲಭ್ಯವನ್ನು ಜತೆಗೂಡಿಸಿ ದಾನಿಗಳ ಅನುದಾನದಿಂದ ಶಾಲೆ ಪ್ರಗತಿಯಾಗಲಿದೆ. ಈ ಮೂಲಕ ಸೌಲಭ್ಯರಹಿತ ಶಾಲೆಗಳೆಡೆಗೆ ಸರಕಾರದ ಗಮನ ಹರಿಸುವುದು ನಮ್ಮ ಉದ್ದೇಶವಾಗಿದೆ. ಇಲ್ಲಿ ನಡೆಸುವ ಕಾರ್ಯವನ್ನು ಆ.14 ರಂದು ಒಂದು ಹಂತದಲ್ಲಿ ಮುಗಿಸಿ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಜತೆ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಸದಸ್ಯರಾದ ಮನೋಹರ್ ಬಳಂಜ ಮತ್ತು ಜಾರಪ್ಪ ಪೂಜಾರಿ, ಉಜಿರೆ ಗ್ರಾ.ಪಂ. ಸದಸ್ಯರಾದ ಮಂಜುನಾಥ್, ಗುರುಪ್ರಸಾದ್ ಕೋಟ್ಯಾನ್ ಮತ್ತು ಲಲಿತಾ, ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸಿ.ಕೆ.ಚಂದ್ರಕಲಾ, ಅತಿಥಿ ಶಿಕ್ಷಕರಾದ ಲಲಿತಾ, ಅನಿತಾ, ಗೌರವ ಶಿಕ್ಷಕಿ ಲೀಲಾವತಿ, ಜ್ಞಾನದೀಪ ಶಿಕ್ಷಕಿ ಪವಿತ್ರಾ, ಶಾಲಾ ಎಸ್.ಡಿ.ಎಂ. ಉಪಾಧ್ಯಕ್ಷ ಉಮೇಶ್ ಗೌಡ, ಸದಸ್ಯರಾದ ಧರ್ಮೇಂದ್ರ, ಶ್ರೀನಿವಾಸ್ ಭಟ್, ಚೆಲುವಯ್ಯ, ಹರೀಶ್ ನೋಂಡೆಲ್, ವೆಂಕಪ್ಪ, ಆಶಾಕಾರ್ಯಕರ್ತೆ ಶಾರದಾ ಮತ್ತಿತರರು ಉಪಸ್ಥಿತರಿದ್ದರು.ಬದುಕು ಕಟ್ಟೋಣ ತಂಡದ ಮತ್ತೋರ್ವ ಸಂಚಾಲಕ ರಾಜೇಶ್ ಪೈ ವಂದಿಸಿದರು.

ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇವತಿ ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಗ್ರಾಮದ ಮುಂಡತ್ತೋಡಿ ಸರಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 61 ಮಕ್ಕಳಿದ್ದಾರೆ. ಶಾಲೆಯ ಕಟ್ಟಡಗಳು ಶಿಥಿಲ ವ್ಯವಸ್ಥೆ ತಲುಪಿದೆ. ನಲಿ-ಕಲಿ ಮಕ್ಕಳಿಗೆ ಅವಶ್ಯಕ ಪೀಠೋಪಕರಣಗಳಿಲ್ಲ, ಒಂದೇ ಕೊಠಡಿಯಲ್ಲಿ ಎರಡು ತರಗತಿಗಳು ನಡೆಯುತ್ತಿವೆ. ಸೂಕ್ತ ಆಟದ ಮೈದಾನ, ಆವರಣಗೋಡೆ, ಪ್ರವೇಶ ದ್ವಾರ, ಕ್ರೀಡಾ ಸಲಕರಣೆಗಳ ಕೊರತೆ ಕಾಡುತ್ತಿದೆ. ಕಂಪ್ಯೂಟರ್, ಪ್ರಿಂಟರ್, ಸ್ಮಾರ್ಟ್ ಕ್ಲಾಸ್ ಮೋನಿಟರ್, ಕಪಾಟು, ಗಡಿಯಾರ, ಗಣಿತ ಪಾಠಕ್ಕೆ ಬೇಕಾದ ಸಲಕರಣೆ, ನೀರಿನ ಫಿಲ್ಟರ್ ಸಹಿತ ಶಾಲೆಗೆ ಸುಣ್ಣ ಬಣ್ಣ ಬಳಿಯಲು ಬದುಕು ಕಟ್ಟೋಣ ತಂಡ ನೇತೃತ್ವ ನೀಡಿ, ರೋಟರಿ ಕ್ಲಬ್ ಮತ್ತು ಪತ್ರಕರ್ತರ ಸಂಘ ಹಾಗೂ ದಾನಿಗಳ ಸಹಯೋಗ ಪಡೆಯಲು ನಿರ್ಧರಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!