• July 25, 2024

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಬೇರ’ ಸಿನಿಮಾದ ಟೀಸರ್ : ಎಸ್‌ಎಲ್‌ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ ‘ಬೇರ’ ಸಿನಿಮಾ

 ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ‘ಬೇರ’ ಸಿನಿಮಾದ ಟೀಸರ್ : ಎಸ್‌ಎಲ್‌ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ ‘ಬೇರ’ ಸಿನಿಮಾ

ಕೋಸ್ಟಲ್‌ವುಡ್‌ನ ಅಪ್ಪಟ ಪ್ರತಿಭೆಗಳು ಸ್ಯಾಂಡಲ್‌ವುಡ್‌ಗೆ ಅತ್ಯುತ್ತಮ ಚಿತ್ರಗಳನ್ನು ನೀಡುತ್ತಿರುವ ಪಾಸಿಟಿವ್ ಟ್ರೆಂಡ್ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲಿ 100 ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಸಿನಿಮಾಗಳ ಹಿಂದೆ ಕರಾವಳಿಯ ಅಪ್ಪಟ ಟ್ಯಾಲೆಂಟ್‌ಗಳು ಕೆಲಸ ಮಾಡುತ್ತಿವೆ ಎಂಬುವುದು ಉಲ್ಲೇಖನೀಯ. ಚಿತ್ರದ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕೋಸ್ಟಲ್ ಪ್ರತಿಭೆಗಳು ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕರಾವಳಿಗರ ಸಿನಿಮಾ ಅಂದ್ರೆ ಅದೇನೊ ಒಂಥರಾ ಅರಿವಿಲ್ಲದೆ ಒಂದು ರೀತಿಯ ಎಕ್ಸೈಟ್‌ಮೆಂಟ್ ಹುಟ್ಟಿ ಬಿಡುತ್ತದೆ.

ಇಲ್ಲೊಂದು ಕರಾವಳಿಗ ಚಿತ್ರತಂಡ ಹೊಸ ಕಥೆಯೊಂದಿಗೆ ಸದ್ದು ಮಾಡಲು ಹೊರಟಿವೆ. ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ ‘ಬೇರ’ ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಉದ್ಯಮಿ ದಿವಾಕರ ದಾಸ್ ನಿರ್ಮಾಣದ ‘ಬೇರ’ ಸಿನಿಮಾದ ಟೀಸರ್ ಬಿಡುಗಡೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.
ಎಸ್ ಎಲ್ ವಿ ಕಲರ್ಸ್ ಲಾಂಛನ ಮತ್ತು ಸಿನಿಮಾ ದ ಟೀಸರ್‌ನ್ನು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಿನಿಮಾ ನಿರ್ದೇಶಕ ವಿನು ಬಳಂಜ ಮಾತನಾಡಿ “ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ ‘ಬೇರ’ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ‘ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು’ ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ” ಎಂದು ಹೇಳಿದರು.

ಸಿನಿಮಾ ನಿರ್ಮಾಪಕ ದಿವಾಕರ್ ದಾಸ್ ನೇರ್ಲಾಜೆ ಮಾತನಾಡಿ “ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿನಿಮಾ ಛಾಯಾಗ್ರಾಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ವಿಟ್ಲ, ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!