ಉಜಿರೆ ಎಸ್ ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ:ಡಾ| ಚಿದೇಂದ್ರ ಎಂ ಶೆಟ್ಟರ್
ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿಯ ರಿಜಿಸ್ಟಾçರ್ ಹಾಗೂ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ| ಚಿದೇಂದ್ರ ಎಂ. ಶೆಟ್ಟರ್ ಅ. 24ರಂದು ಭೇಟಿ ನೀಡಿದರು. ಬಳಿಕ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ವಿಶಾಲವಾದ ಕಟ್ಟಡ ನೋಡಿ ಯಾವ ರೋಗಿಯೂ ಬರುವುದಿಲ್ಲ. ಆಸ್ಪತ್ರೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ತುರ್ತಾಗಿ ದೊರೆಯುವ ಉತ್ತಮ ಸೇವೆ ಹಾಗೂ ರೋಗಿ ಮತ್ತು ರೋಗಿಯ ಸಹಾಯಕರೊಂದಿಗೆ ನಾವು ನಡೆಸುವ ಸಂವಹಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಧಾರವಾಡ ಆಸ್ಪತ್ರೆ ಪ್ರಾರಂಭಗೊಂಡಾಗ ಅಲ್ಲಿ ವಿಶಾಲವಾದ ಕಟ್ಟಡ, ವಿಶಾಲವಾದ ಹೊರಾಂಗಣ ಎಲ್ಲವೂ ಖಾಲಿ ಖಾಲಿ ಇತ್ತು, ಕೆಲವೇ ವರ್ಷದಲ್ಲಿ ಆ ಆಸ್ಪತ್ರೆಯಲ್ಲಿ ಜಾಗದ ಕೊರತೆ ಆಗುವಂತೆ ರೋಗಿಗಳ ಸಂಖ್ಯೆ ಜಾಸ್ತಿಯಾಯಿತು. ವೈದ್ಯರ, ದಾದಿಯರ ಹಾಗೂ ಸಿಬ್ಬಂದಿಗಳ ದುಡಿಮೆ ಮತ್ತು ತ್ಯಾಗದಿಂದ ಮಾತ್ರ ಇದು ಸಾಧ್ಯ. ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ಕೂಡ ಇದೇ ರೀತಿ ಅಭಿವೃದ್ಧಿ ಹೊಂದುತ್ತಿದೆ. ಹೊರರೋಗಿ ವಿಭಾಗ ಹಾಗೂ ಒಳರೋಗಿ ವಿಭಾಗದಲ್ಲಿ ಸಾಕಷ್ಟು ರೋಗಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಖಾಲಿ ಜಾಗ ಕಾಣಲು ಸಾಧ್ಯವಿಲ್ಲ ಎಂದರು.
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಬಣ್ಣ ಶೆಟ್ಟಿಗಾರ್ ಮಾತನಾಡುತ್ತಾ, ನಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಛಲದೊಂದಿಗೆ ಶ್ರಮಪಟ್ಟಾಗ ಉನ್ನತ ಹುದ್ದೆಗೆ ನಮ್ಮನ್ನು ಕೊಂಡೊಯ್ಯಬಲ್ಲದು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಎಲ್ಲಾ ವೈದ್ಯಕೀಯ ಸೇವೆ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ| ಸ್ವರ್ಣಲತಾ, ಕಿವಿ,ಮೂಗು,ಗಂಟಲು ತಜ್ಞ ಡಾ| ರೋಹನ್ ದೀಕ್ಷಿತ್, ಪೇಥಲಾಜಿಸ್ಟ್ ಡಾ| ವಿನಿತಾ ಅಗಸ್ಟಿನ್ ಹಾಗೂ ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.