• November 24, 2024

ಆರ್ಟಿಕಲ್: ಯೇಸು ಕ್ರಿಸ್ತನ ಜನನ ನವ ಲೋಕದ ಉಗಮ

 ಆರ್ಟಿಕಲ್:   ಯೇಸು ಕ್ರಿಸ್ತನ ಜನನ ನವ ಲೋಕದ ಉಗಮ

 


ಬರಹ: ಸುನಿಲ್ ಗೊನ್ಸಾಲ್ವಿಸ್, ಮಡಂತ್ಯಾರು.

ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಸಮಸ್ತ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರವಾದ ಹಾಗೂ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.

ಡಿಸೆಂಬರ್ 25 ರಂದು ಮಧ್ಯರಾತ್ರಿ ನಮ್ಮ ರಕ್ಷಕ ಅಂದರೆ ನಮ್ಮ ದೇವರಾದ ಪ್ರಭು ಯೇಸು ಕ್ರಿಸ್ತರು ಜನಿಸಿದ ಹಬ್ಬವೇ ಕ್ರಿಸ್ಮಸ್. ಪರಿಶುದ್ಧ ಕನ್ಯಾಮರಿಯಮ್ಮ ಹಾಗೂ ಸಂತ ಜೋಸೆಫ್ ಪ್ರಭು ಯೇಸು ಕ್ರಿಸ್ತರ ಮಾತಾ ಪಿತರು. ಸಂತ ಜೋಸೆಫರಿಗೆ ಕನ್ಯಾಮರಿಯಮ್ಮನವರೊಂದಿಗೆ ವಿವಾಹ ಆಗಿರಲಿಲ್ಲ, ಕೇವಲ ನಿಶ್ಚಿತಾರ್ಥ ಮಾತ್ರ ಆಗಿತ್ತು. ದೇವದೂತರು ಸಂತ ಜೋಸೆಫರಿಗೆ ಕನಸಿನಲ್ಲಿ ದರ್ಶನ ಕೊಟ್ಟು ‘ಕನ್ಯಾಮರಿಯಮ್ಮನವರನ್ನು ನಿನ್ನ ಸಂಗಡ ಕರೆತರಲು ಹೆದರಬೇಡ, ಯಾಕೆಂದರೆ ಅವರು ಪವಿತ್ರಾತ್ಮರ ಕೃಪೆಯಿಂದ ಗರ್ಭವತಿ ಆಗುತ್ತಾರೆ’ ಎಂದು ಹೇಳುತ್ತಾರೆ. ಆಗ ದೇವದೂತರು ಹೇಳಿದಂತೆ ಸಂತ ಜೋಸೆಫರು ಮಾಡುತ್ತಾರೆ. ಹೀಗೆ ದೇವರ ಪುತ್ರರಾಗಿ ಪ್ರಭು ಯೇಸುಕ್ರಿಸ್ತರು ಗೋದಲಿಯಲ್ಲಿ ಜನಿಸುತ್ತಾರೆ. ಯಾಕೆಂದರೆ ಯಾರ ಮನೆಯಲ್ಲಿಯೂ ಸಹ ಅವರಿಗೆ ಜಾಗ ಸಿಗಲಿಲ್ಲ.

”ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಸಮಾಧಾನ” ಎಂಬ ಗಾಯನವನ್ನು ದೇವದೂತರು ಪ್ರಭು ಯೇಸು ಕ್ರಿಸ್ತ ಜನಿಸಿದಾಗ ಹಾಡುತ್ತಾರೆ. ಈ ಮೂಲಕ ಕ್ರಿಸ್ತನ ಜನನದ ಶುಭ ಸಂದೇಶ ಎಲ್ಲರಿಗೂ ತಿಳಿಯುತ್ತದೆ.

ಪ್ರಭು ಯೇಸು ಕ್ರಿಸ್ತರು ಈ ಭೂಮಿಗೆ ಬಂದದ್ದು ನಮ್ಮ ಹಾಗೂ ಈ ಲೋಕದ ಸಕಲ ಪಾಪವನ್ನು ಪರಿಹರಿಸುವುದಕ್ಕೋಸ್ಕರ. ತನ್ನ ಒಬ್ಬನೇ ಮಗನನ್ನು ದೇವರು ಈ ಭೂಮಿಗೆ ಧಾರೆ ಎರೆದು, ಅವರ ಮೂಲಕ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರುತ್ತಾರೆ. ಪವಿತ್ರ ಗ್ರಂಥ ಬೈಬಲ್ ನಲ್ಲಿ ಉಲ್ಲೇಖಿಸಿದಂತೆ ದೇವರು ‘ಇಮ್ಮಾನುವೆಲ್’. ಇಮ್ಮಾನುವೆಲ್ ಎಂದರೆ ದೇವರು ನಮ್ಮ ಜೊತೆ ಇದ್ದಾರೆ ಎಂದು ಅರ್ಥ. God is with us. ಅವರ ಸಾನಿಧ್ಯ ನಮ್ಮ ಮೇಲೆ ಸದಾ ಇದೆ. ಎಲ್ಲಾ ವಿಧದ ಕಷ್ಟ ‌ಸಂಕಷ್ಟದ ಸಮಯದಲ್ಲಿ ನಮ್ಮ ಕೈ ಹಿಡಿದು ಸದಾ ಮುನ್ನಡೆಸುತ್ತಾರೆ. ಇದಕ್ಕೆ ಪುಷ್ಟಿ ಎಂಬಂತೆ ‘ಯೇಸು’ ಅಥವಾ ಆಂಗ್ಲ ಭಾಷೆಯಲ್ಲಿ ‘ಜೀಸಸ್’ ಎಂದರೆ ‘ದೇವರು ರಕ್ಷಕರು’ ಎಂದು ಅರ್ಥ ಬರುತ್ತದೆ. ಪುರಾತನ ಹಿಂದೂ ಧಾರ್ಮಿಕ ಗ್ರಂಥವಾದ ಋಗ್ವೇದದಲ್ಲಿ ಯೇಸು ಸ್ವಾಮಿಯ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಅದರಲ್ಲಿ ಹೀಗೆ ಹೇಳುತ್ತದೆ –
ಓಂ ಶ್ರೀ ಕನ್ನಿಕಾಸುತನಾಯ ನಮಃ ಅಂದರೆ ಕನ್ನಿಕೆಯ ಮೂಲಕ ಜನಿಸಿದವನು.
ಓಂ ಶ್ರೀ ದರಿದ್ರಾಯ ನಮಃ. ಅಂದರೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದವನು ಮತ್ತು ಜೀವನ ಸಾಗಿಸಿದವನು.
ಓಂ ಶ್ರೀ ವೃಕ್ಷಶೂಲಾಯ ನಮಃ. ಅಂದರೆ ಮರದ ಶಿಲುಬೆಯಲ್ಲಿ ತನ್ನ ಜೀವ ಅರ್ಪಿಸಿದವನು. ಕೊನೆಯದಾಗಿ ಓಂ ಶ್ರೀ ಪಂಚಕಾಯಾಯ ನಮಃ. ಅಂದರೆ ತನ್ನ ದೇಹದಲ್ಲಿ 5 ಗಾಯ ಉಳ್ಳವನು.
ದೇವರು ಮನುಷ್ಯರಾಗಿದ್ದಾರೆ ಹಾಗಾದರೆ ನಾವು ದೇವರಾಗಲು ಆಗುವುದಿಲ್ಲ. ಕನಿಷ್ಠ ಪಕ್ಷ ನಾವು ಮನುಷ್ಯರಾಗುವುದು ಯಾವಾಗ?‌ ಅಂದರೆ ನಮ್ಮ ನೆರೆಹೊರೆಯವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ‘ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದು ಲೇಸು’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅಂತೆಯೇ ನಾವು ಸೋಮಾರಿಗಳಾಗದೇ ಪರರ ಸೇವೆಗೆ ನಮ್ಮ ಜೀವನವನ್ನು ಮೀಸಲಿರಿಸಬೇಕು. ಸೇವೆಗಾಗಿ ನೀ ಬಾಳು ಓ ಮನುಜ. ಹಿಂದೂ ಧರ್ಮದಲ್ಲಿ ಹೇಳುವಂತೆ ‘ಸೇವಾ ಪರಮೋಧರ್ಮ.’ ಪರರ ಸೇವೆ ಮಾಡುವುದು ಅತೀ ಶ್ರೇಷ್ಠವಾದ ಗುಣ. ಎಲ್ಲರಿಂದ ಅದು ಸಾಧ್ಯವಿಲ್ಲ. ಕಷ್ಟದಲ್ಲಿರುವವರಿಗೆ ನಾವು ಸೇವೆ ಮಾಡಿದರೆ ಅದು ದೇವರಿಗೆ ಮಾಡಿದ ಸೇವೆಗೆ ಸಮ. ಅಂದರೆ ಕಷ್ಟದಲ್ಲಿ ಇರುವ ವ್ಯಕ್ತಿಗಳಲ್ಲಿ ನಾವು ದೇವರನ್ನು ಕಂಡಂತೆ ಆಗುತ್ತದೆ. ಕೋಲ್ಕೋತ್ತಾದ ಮದರ್ ತೆರೆಸಾರವರು ಮಾಡಿದ್ದು ಅದನ್ನೇ. ‘ನಾನು ಮಾಡುವುದು ರೋಗಿಗಳ ಸೇವೆಯನ್ನಲ್ಲ, ದರಿದ್ರ ನಾರಾಯಣ ಸೇವೆ’ ‘ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೇ ಸೇವೆ ಮಾಡು’ ಎಂದು ಅವರು ಹೇಳಿಕೊಂಡಿದ್ದರು. ಅಶಕ್ತರು, ಬಡವರರು, ದೀನದಲಿತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ನಮ್ಮ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರುತ್ತದೆ. ನಮ್ಮ ಸರಳ ಜೀವನದ ಮೂಲಕ ನಾವು ಇತರರಿಗೆ ಮಾದರಿ ವ್ಯಕ್ತಿಗಳಾಗೋಣ. ನಮ್ಮ ಧರ್ಮವನ್ನು ಚೆನ್ನಾಗಿ ಪಾಲಿಸಿ, ಇತರರ ಧರ್ಮಕ್ಕೂ ಗೌರವ ಕೊಡುವುದು ನಮ್ಮ ಧರ್ಮ. ಇದು ನಮ್ಮ ಕರ್ತವ್ಯ ಕೂಡ. ಈ ನಿಟ್ಟಿನಲ್ಲಿ ಅಂತರ್ ಧರ್ಮಿಯ ಸಂವಾದ ಕಾರ್ಯಕ್ರಮ, ಸಂಯುಕ್ತ ಹಬ್ಬಗಳ ಆಚರಣೆ ಪೂರಕವಾಗಿದೆ. ಯೇಸು ಕ್ರಿಸ್ತರ ಜೀವನ ಸಾರ್ವತ್ರಿಕ ಪ್ರೀತಿ ಹಾಗೂ ಸಹೋದರತೆಯನ್ನು ಸಾರಿ ಹೇಳುತ್ತದೆ. ಪ್ರೀತಿಯಲ್ಲಿದೆ ಶಕ್ತಿ. ದೇವರು ಪ್ರೀತಿ ಸ್ವರೂಪರಾಗಿದ್ದಾರೆ.

ನಾವು ಕೂಡ ಎಲ್ಲರನ್ನು ಪ್ರೀತಿಸುವ ಕಲೆಯನ್ನು ಕಲಿಯಲು ನಮಗೆ ಆಹ್ವಾನ ನೀಡುತ್ತಾರೆ. ದ್ವೇಷ ಬಿಡೋಣ, ಪರಸ್ಪರ ಪ್ರೀತಿ ಹಂಚೋಣ. ಮುಖ್ಯವಾಗಿ ಈ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ರಭು ಯೇಸು ಕ್ರಿಸ್ತರು ನಮ್ಮ ಹೃದಯದಲ್ಲಿ ಹುಟ್ಟಿ ಬರಲಿ. ಕ್ರಿಸ್ತರ ಜೀವನ ನಮಗೆ ಆದರ್ಶವಾಗಲಿ. ಸಮಾಜದಲ್ಲಿ ಶಾಂತಿ ನೆಲೆಗೊಳ್ಳಲು ಸದಾ ಪ್ರಾರ್ಥಿಸೋಣ. ಮುಖ್ಯವಾಗ ಬಹು ತಿಂಗಳುಗಳಿಂದ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ಆದಷ್ಟು ಬೇಗ ಕೊನೆಗೊಳ್ಳಲು ಪ್ರಾರ್ಥಿಸೋಣ. ನಮ್ಮ ಪರಿಸರದಲ್ಲಿ ಸಂತೋಷದ ಅಲೆಯನ್ನು ಹಬ್ಬಿಸುವ ವ್ಯಕ್ತಿಗಳಾಗೋಣ. ತಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು.


Related post

Leave a Reply

Your email address will not be published. Required fields are marked *

error: Content is protected !!