ಅಜೆಕಾರ್: ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ
ಅಜೆಕಾರ್ : ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶೀಘ್ರ ರೋಗ ಪತ್ತೆ ಮಾಡಲು ಅನುಕೂಲವಾಗುವುದರ ಜೊತೆಗೆ ಜನರಿಗೆ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ಅಜೆಕಾರ್ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಪ್ರವೀಣ್ ಅಮೃತ್ ಮಾರ್ಟಿಸ್ ಅಭಿಪ್ರಾಯಪಟ್ಟರು.
ಅವರು ಅ. 30 ರಂದು ಅಜೆಕಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ಸೈಂಟ್ ಅಲ್ಫೋನ್ಸಾ ಚರ್ಚ್ ಅಜೆಕಾರ್, ಸೇಕ್ರೆಡ್ ಹಾರ್ಟ್ ಚರ್ಚ್ ಅಜೆಕಾರ್, ಲಯನ್ಸ್ ಕ್ಲಬ್ ಅಜೆಕಾರ್ ಇವರ ನೇತೃತ್ವದಲ್ಲಿ ಈ ಶಿಬಿರವು ನಡೆಯಿತು.
ಅಜೆಕಾರ್ ಸೈಂಟ್ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಥ್ಯೂ ಅಂಬಾಟ್ ಶಿಬಿರದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಹರ್ಷ ಗೌಡ, ಬೆಳ್ತಂಗಡಿ ಲಾಯಿಲದ ಜ್ಯೋತಿ ಆಸ್ಪತ್ರೆಯ ತಜ್ಞ ವೈದ್ಯರಾದ ಭಗಿನಿ ಆನ್ ಗ್ರೇಸ್, ಅಜೆಕಾರ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ. ವಿಶ್ವನಾಥ್ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಇದರ ಕೋಶಾಧಿಕಾರಿ ಶ್ರೀ. ರವೀಂದ್ರ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಂಟ್ ಅಲ್ಫೋನ್ಸಾ ಚರ್ಚಿನ ಶ್ರೀಮತಿ ಟೋನಿ ಕಾರಕ್ಕಾಟ್ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಕಾರ್ಯಕರ್ತರಾದ ಶ್ರೀ. ಮಾರ್ಕ್ ಡಿ’ ಸೋಜಾ ಕಾರ್ಯಕ್ರಮ ನಿರೂಪಿಸಿ, ಅಜೆಕಾರ್ ಲಯನ್ಸ್ ಕ್ಲಬ್ ನ ಪದಾಧಿಕಾರಿ ಶ್ರೀ. ಬೇಬಿಲೋನ್ ವಂದನಾರ್ಪಣೆಗೈದರು.
ಈ ಶಿಬಿರದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ನೇತ್ರ ಪರೀಕ್ಷೆ, ದಂತ ತಪಾಸಣೆ ಮತ್ತು ಚಿಕಿತ್ಸೆ, ಕಿವಿ, ಮೂಗು, ಗಂಟಲು ವಿಭಾಗ, ಸಾಮಾನ್ಯ ವೈದ್ಯಕೀಯ ತಪಾಸಣೆ, ಬೆಳ್ತಂಗಡಿ ಲಾಯಿಲ ಜ್ಯೋತಿ ಆಸ್ಪತ್ರೆಯ ತಜ್ಞ ವೈದ್ಯರಿಂದ ವೆರಿಕೋಸ್ ವೇನ್ ತಪಾಸಣೆ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ, ರಕ್ತನಿಧಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ನೇತೃತ್ವದಲ್ಲಿ ರಕ್ತದಾನ ಶಿಬಿರವು ನಡೆಯಿತು. ಸುಮಾರು 100 ಮಂದಿ ಈ ಶಿಬಿರದ ಪ್ರಯೋಜನ ಪಡೆದರು.
ಈ ಶಿಬಿರಕ್ಕೆ ಸೈಂಟ್ ಮೇರಿಸ್ ಚರ್ಚ್ ಅಜೆಕಾರ್, ಗ್ರಾಮ ಪಂಚಾಯತ್ ಮರ್ಣೆ, ಮಮತಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಅಜೆಕಾರ್ ಇವುಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರವು ನಡೆಯಿತು. ಅಜೆಕಾರ್ ಸೇಕ್ರೆಡ್ ಹಾರ್ಟ್ ಚರ್ಚಿನ ಸ್ವಯಂ ಸೇವಕರು, ಅಜೆಕಾರ್ ಸೈಂಟ್ ಅಲ್ಫೋನ್ಸಾ ಚರ್ಚಿನ ಸ್ವಯಂ ಸೇವಕರು, ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಸಿಬ್ಬಂದಿ ವರ್ಗ, ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿ ಕುಮಾರಿ ಪ್ರಕೃತಿ ಮುಂತಾದವರು ಶಿಬಿರದ ಯಶಸ್ಸಿಗೆ ಸಹಕರಿಸಿದರು.