ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಶಂಬರ 17 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರಗಲಿದ್ದು, ಇದರ ಪೂರ್ವ ತಯಾರಿ ಸಭೆಯು ಪರಿಷತ್ತಿನ ಅಧ್ಯಕ್ಷ ಡಿ ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ವಾಣಿ ಕಾಲೇಜಿನಲ್ಲಿ ಜರಗಿತು.
ಸಭೆಯಲ್ಲಿ ಸಮ್ಮೇಳನದ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಬೆಳ್ತಂಗಡಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಯುವ ಉದ್ಯಮಿ ಸುವರ್ಣ ಆರ್ಕೆಡೆಯ ಸಂಪತ್ ಸುವರ್ಣ, ಕೋಶಾಧ್ಯಕ್ಷರಾಗಿ ಮೀನಾಕ್ಷಿ ಎನ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೋಹನ್ ಗೌಡ, ಕಾರ್ಯದರ್ಶಿಯಾಗಿ ವಾಣಿ ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಅವರು ಆಯ್ಕೆಯಾದರು.
ಸಮ್ಮೇಳನದ ಸಂಯೋಜನ ಸಮಿತಿಯ ನೂತನ ಅಧ್ಯಕ್ಷ ಜಯಾನಂದ ಗೌಡ ಅವರು ಮಾತನಾಡುತ್ತಾ, ತಾಲೂಕು ಸಮ್ಮೇಳನವನ್ನು ಆಯೋಜಿಸುವ ಅವಕಾಶ ವಾಣಿ ಶಿಕ್ಷಣ ಸಂಸ್ಥೆಗೆ ಲಭಿಸಿರುವುದು ಸಂತೋಷದ ವಿಚಾರ. ಈ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕಾರ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು. ಅಲ್ಲದೆ ಮುಂದಿನ ಸಭೆಯೊಳಗೆ ಪೂರ್ಣ ರೂಪದ ಸಂಯೋಜನ ಸಮಿತಿಯಯನ್ನು ರಚಿಸಿಕೊಂಡು, ಸಮ್ಮೇಳನದ ಉದ್ಘಾಟನೆ, ಸಮಾರೋಪ, ವಿವಿಧ ಗೋಷ್ಠಿಗಳು, ಹಾಗೂ ಇತರ ಕಾರ್ಯಕಲಾಪಗಳನ್ನು ಅಂತಿಮಗೊಳಿಸಲಾಗುವುದೆನ್ನುತ್ತಾ ಸಮಿತಿಗೆ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ರವರನ್ನು ಕೇಳಿಕೊಳ್ಳುವುದರೊಂದಿಗೆ ವಿಧಾನ ಪರಿಷತ್ತಿನ ಶಾಸಕರುಗಳಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಅವರನ್ನು ಮುಖ್ಯ ಅತಿಥಿಗಳಾಗಿ ಸಮ್ಮೇಳನಕ್ಕೆ ಆಹ್ವಾನಿಸಲಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಬೆಳ್ತಂಗಡಿಯ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬಿ ಲಕ್ಷ್ಮಣ ಪೂಜಾರಿ, ವಸಂತಿ ಮುಂಡಾಜೆ, ಪ್ರಸನ್ನ ಪಿ ಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಗೌಡ, ಶ್ರೀ ಗುರುದೇವ ಪಿ ಯು ಕಾಲೇಜಿನ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲು, ವಿಷ್ಣು ಪ್ರಕಾಶ್ ಬೆಳ್ತಂಗಡಿ, ಅನುರಾಧಾ ರಾವ್, ಮಹಾಬಲ ಗೌಡ ಎನ್, ಬೆಳ್ತಂಗಡಿ ಜೇಸೀ ಅಧ್ಯಕ್ಷ ಶಂಕರ ರಾವ್, ಬೆಳ್ಳಿಯಪ್ಪ ಗೌಡ ಬೆಳಾಲು ಮೊದಲಾದವರು ಉಪಸ್ಥಿತರಿದ್ದರು.
ವಾಣಿ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ ಸ್ವಾಗತಿಸಿ, ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು. ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಸಭೆಯನ್ನು ನಿರ್ವಹಿದರು.