ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ ಹಾಗೂ ಕೆಸರೊಡೊಂಜಿ ದಿನದ ಸಂಭ್ರಮ
ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ ಇಂದು ಮನೆ ಮಾಡಿತ್ತು. ಶಾಲೆಯು ತೆಂಗಿನ ಗರಿಯಿಂದ ಮಾಡಿದ ವಿವಿಧ ಆಕೃತಿಯಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಶಾಲೆಯ ಒಳಭಾಗಕ್ಕೆ ಹೋದಾಗ ಮೂಲೆ ಮೂಲೆಯಲ್ಲೂ ತುಳುನಾಡುಗೆ ಸಂಬಂಧಪಟ್ಟಂತ ವಿವಿಧ ಭಕ್ಷ ಭೋಜ್ಯ, ಆಟಿಯಲ್ಲಿ ಆಡುವಂತಹ ವಿಶೇಷ ಆಟಗಳು, ರಾಮಾಯಣ ಮಹಾಭಾರತದ ಕಥೆಗಳು ಹೇಳುವ ,ವಿವಿಧ ಔಷಧೀಯ ಸಸ್ಯಗಳು ಎಲೆಗಳು ಹಾಗೂ ಬೇರುಗಳ ಪ್ರದರ್ಶನವನ್ನು ಮಾಡಲಾಗಿತ್ತು. ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಶ್ರೀಯುತ ಹರ್ಷೇಂದ್ರ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಭಾಗವಹಿಸುವ ಸ್ವತಃ ಕಲಾವಿದರು ಹಾಗೂ ಕಲಾ ಪ್ರೋತ್ಸಾಹಕರು ಆಗಿರುವ ಆಗಿರುವ ಶ್ರೀಯುತ ಭುಜಬಲಿ ಜೈನ್ ಇಡೀ ಕಾರ್ಯಕ್ರಮವನ್ನು ವೀಕ್ಷಿಸಿ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾಭ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಿ ತುಳು ನಾಡಿಗೆ ತುಳುವ ಭಾಷೆಗೆ ಸಂಬಂಧಪಟ್ಟಂತಹ ಹಾಡು ಗಾದೆ ಸಂಧಿ ಪಾಡ್ದನ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಶಾಲೆಯಲ್ಲಿ ಭತ್ತದ ಕೃಷಿಯನ್ನು ಮಾಡುವ ಉದ್ದೇಶದಿಂದ ಗದ್ದೆಯನ್ನು ತಯಾರಿಸಲಾಗಿತ್ತು. ವಿದ್ಯಾರ್ಥಿಗಳು ಗದ್ದೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಆಟಗಳನ್ನು ಆಡಿ ಸಂಭ್ರಮ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀಯುತ ಭುಜಗಲಿ ಜೈನ ಇವರು ನೇಜಿಯನ್ನು ಪರಿಸರ ಸಂಘಕ್ಕೆ ಹಸ್ತಾಂತರಿಸಿದರು.ಈ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಯುವತಿಮಂಡಲ ಧರ್ಮಸ್ಥಳದ ಶ್ರೀಮತಿ ಭವಾನಿ, ಧರ್ಮಸ್ಥಳದ ಜ್ಞಾನವಿಕಾಸ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಪೂಜಾ ಪಕಳ ಭಾಗವಹಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಾಲಾ ವಿದ್ಯಾರ್ಥಿಗಳು ಆಟಿಗೆ ಸಂಬಂಧಪಟ್ಟ ತಿಂಡಿ ತಿನಿಸುಗಳನ್ನು ಪರಸ್ಪರ ಹಂಚಿ ಸಂಭ್ರಮಪಟ್ಟರು. ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ಚಿಟ್ಟೆಗಳಂತೆ ಹಾರಾಡುತ್ತಿದ್ದರು. ಒಟ್ಟಾರೆಯಾಗಿ ಶಾಲೆಯು ತುಳುನಾಡಿನ ವರ್ಣನೆಯನ್ನು ಬಿಂಬಿಸುತ್ತಿತ್ತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾಗಿರುವ ಅಭಿರಾಮ್ ಚಿನ್ಮೈರೈ, ಚಿನ್ಮಯ್ ಶೆಣೈ ಹಾಗೂ ಶ್ರಾವ್ಯ ನಿರ್ವಹಿಸಿದರು. ಶಾಲಾ ಸಹ ಶಿಕ್ಷಕಿಯಾಗಿರುವ ಶ್ರೀಮತಿ ರಮಾರಾಜೇಶ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕರು ಶಿಕ್ಷಕೇತರ, ಸಿಬ್ಬಂದಿಗಳು, ವಿದ್ಯಾರ್ಥಿ ಹೆತ್ತವರು, ಊರಿನವರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.