ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣಾ ಮಾದರಿ ನೀತಿ ಜಾರಿ: ಎಂಎಲ್ಎ ಬೋರ್ಡ್ ಗಳನ್ನು ತೆರವುಗೊಳಿಸಿದ ಶಾಸಕರು: ಎಲ್ಲೆಡೆ ಪೊಲೀಸರ ಕಣ್ಗಾವಲು
ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣಾ ಮಾದರಿ ನೀತಿ ಸಂಹಿತೆಯೂ ಜಾರಿಗೊಂಡಿದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನೆರವೇರಿಸುವಂತಿಲ್ಲ. ಹೀಗಾಗಿ ವಿವಿಧ ಯೋಜನೆಗಳ ಶಿಲಾನ್ಯಾಸ, ಹಕ್ಕುಪತ್ರ ವಿತರಣೆ, ಉದ್ಘಾಟನೆಯಂತಹ ಕಾರ್ಯಕ್ರಮಗಳನ್ನು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಿಲ್ಲಿಸಲಾಗಿದೆ.
ಜನಪ್ರತಿನಿಧಿಗಳ ಸಾಧನೆ ಸಂಬಂಧಿ ಪ್ರದರ್ಶನಗಳು, ಪೋಸ್ಟರ್, ಬ್ಯಾನರ್, ಕಟೌಟ್‌ಗಳ ತೆರವು ಕಾರ್ಯ ಕೂಡಾ ಆರಂಭಗೊಂಡಿದೆ.
ಇನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕರು, ಸಂಸದರ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಸರ್ಕಾರಿ ವಾಹನಗಳಲ್ಲಿ ಓಡಾಡುತ್ತಿದ್ದ ಜನಪ್ರತಿನಿಧಿಗಳು ಸರ್ಕಾರಿ ಕಾರು ತ್ಯಜಿಸಿ ಖಾಸಗಿ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಇನ್ನು ಕಾರಿಗೆ ಅಂಟಿಸಲಾಗಿರುವ ಎಂಎಲ್‌ಎ ಬೋರ್ಡ್‌ಗಳನ್ನೂ ಶಾಸಕರು ತೆರವು ಮಾಡಿದ್ದಾರೆ.
ನೀತಿ ಸಂಹಿತೆಯ ಪರಿಣಾಮಕಾರಿ ಜಾರಿಗಾಗಿ ಪೊಲೀಸರು ಎಲ್ಲೆಡೆ ಕಣ್ಗಾವಲು ಇರಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸಹಿತ ಹಲವು ತಂಡಗಳನ್ನು ರಚಿಸಲಾಗಿದ್ದು, ವಾಹನಗಳ ತಪಾಸಣೆ ಸಹಿತ ಚುನಾವಣೆ ಅಕ್ರಮ ಉಂಟಾಗದಂತೆ ಈ ತಂಡಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಮೇ 21ರವರೆಗೆ ಯಾವುದೇ ಆಯುಧಗಳನ್ನು ಒಯ್ಯುವುದಕ್ಕೆ ಸಂಪೂರ್ಣ ನಿಷೇಧವಿದೆ. ಆಯುಧ ಪರವಾನಿಗೆಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಎ. 4ರೊಳಗೆ ಪೊಲೀಸ್ ಠಾಣೆಗಳಲ್ಲಿ ಅಥವಾ ಅಧಿಕೃತ ಆಯುಧ ವಿತರಕರಲ್ಲಿ ಠೇವಣಿ ಇಡಬೇಕು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸೂಚಿಸಿದ್ದಾರೆ.
ಒಂದು ವೇಳೆ ಆತ್ಮ ರಕ್ಷಣೆ ಮತ್ತು ಕೃಷಿ ರಕ್ಷಣೆ ಉದ್ದೇಶಕ್ಕೆ ಆಯುಧ ಅನಿವಾರ್ಯವಾಗಿದ್ದಲ್ಲಿ ಪರವಾನಿಗೆ ಅಮಾನತಿನಿಂದ ವಿನಾಯಿತಿ ಪಡೆಯಲು ಎಪ್ರಿಲ್ 4ರೊಳಗೆ ಅರ್ಜಿ ಸಲ್ಲಿಸಬೇಕು ಎಂದವರು ವಿವರಿಸಿದ್ದಾರೆ.