5,8ನೇ ತರಗತಿ ಮಕ್ಕಳಿಗೆ ಈ ವರ್ಷ ಹೊಸ ಪರೀಕ್ಷೆ: ಕಲಿಕಾ ಗುಣಮಟ್ಟ ಮೌಲ್ಯಮಾಪನ ಟೆಸ್ಟ್ ಯಾರನ್ನೂ ಫೇಲ್ ಮಾಡಲ್ಲ: ನಾಗೇಶ್ ಸ್ಪಷ್ಟನೆ
ಬೆಂಗಳೂರು: ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಂತಕ್ಕೆ ತಲುಪುವ ಮುನ್ನ ಅವರ ಕಲಿಕಾ ಮಟ್ಟ ಮೌಲ್ಯಮಾಪನ ಮಾಡುವ ದೃಷ್ಠಿಯಿಂದ 5ಮತ್ತು 8ನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ವರ್ಷದಿಂದಲೇ ಆರಂಭಿಸಲು ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ ನಾಗೇಶ್ ಅವರು ತಿಳಿಸಿದ್ದಾರೆ.
ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಅ.13ರಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 10ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವ ಮುನ್ನ 5 ಮತ್ತು 8ನೇ ತರಗತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಆದರೆ, ಈ ಪರೀಕ್ಷೆಗಳು ಪಬ್ಲಿಕ್ ಪರೀಕ್ಷೆಗಳು ಆಗಿರುವುದಿಲ್ಲ. ಸಾಮಾನ್ಯ ಪರೀಕ್ಷೆಯಾಗಿರುತ್ತದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಬದಲಿಗೆ ಪರೀಕ್ಷೆ ಅಥವಾ ಮೌಲ್ಯ ಮಾಪನದಲ್ಲಿ ಯಾವುದೇ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿರುವುದು ಕಂಡು ಬಂದರೆ ಅಂತವರಿಗೆ ಕೆಲ ತಿಂಗಳು ಮತ್ತೆ ತರಗತಿ ನಡೆಸಿ ಅಥವಾ ತರಬೇತಿ ನೀಡಿ ಮತ್ತೊಮ್ಮೆ ಪರೀಕ್ಷೆ ಬರೆಸಲಾಗುತ್ತದೆ. ಆ ಮೂಲಕ ಅವರ ಕಲಿಕಾ ಮಟ್ಟ ಸುಧಾರಿಸಿ ಮುಂದಿನ ತರಗತಿಗೆ ಇತರೆ ವಿದ್ಯಾರ್ಥಿಗಳ ಜೊತೆಯಕಲ್ಲೇ ಕಳುಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.