ಬಂಗಾಡಿ ಸರಕಾರಿ ಪ್ರೌಢ ಶಾಲಾ ಪರಿಸರದಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷ: ಪೋಷಕರೇ ಜಾಗೃತೆ ವಹಿಸಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಬೆಳ್ತಂಗಡಿ ಪೊಲೀಸ್ ಠಾಣೆಗೆ ಶಾಲಾ ವತಿಯಿಂದ ದೂರು
ಬಂಗಾಡಿ: ಬೆಳ್ತಂಗಡಿ ತಾಲೂಕಿನ ಕಿಲ್ಲೂರು ರಸ್ತೆಯ ಬಂಗಾಡಿ ಸರಕಾರಿ ಪ್ರೌಢಶಾಲೆ ಪರಿಸರದಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷರಾಗಿದ್ದಾರೆ, ಪೋಷಕರೇ ಜಾಗೃತೆ ವಹಿಸಿ ಎಂಬ ವಿಷಯವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ಮಕ್ಕಳ ಅಪಹರಣ ಎಂಬ ವದಂತಿಗೆ ಕಾರಣವಾಗಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ನ.7 ರಂದು ಬಂಗಾಡಿ ಪ್ರೌಢ ಶಾಲಾ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿ ಒಬ್ಬ ಹುಡುಗನನ್ನು ಕರೆದು ನಿನ್ನ ಹೆಸರೇನೆಂದು ಕೇಳಿ ಕಾರಿನ ಸೈಡ್ ಡೋರ್ ಓಪನ್ ಮಾಡುವ ವೇಳೆ ಹುಡುಗ ಹೆದರಿ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ಇದನ್ನು ಮಕ್ಕಳು ಪೋಷಕರ ಗಮನಕ್ಕೆ ತಂದಿದ್ದು, ಬಳಿಕ ಯಾರೋ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳನ್ನು ಹಿಡಿಯುವವರು ಪ್ರತ್ಯಕ್ಷರಾಗಿದ್ದಾರೆ ಎಂದು ಪೊಸ್ಟ್ ಹಾಕಿದ್ದು, ಬಹಳಷ್ಟು ವೈರಲ್ ಆಗುತ್ತಿದೆ.ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲಾ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಡುವೆ ಈ ಪರಿಸರದ ಯುವಕರ ತಂಡವೊಂದು ತಮಾಷೆಗಾಗಿ ಮಕ್ಕಳನ್ನು ಹೆದರಿಸಿದ್ದರು ಎಂಬ ವಿಚಾರದ ಬಗ್ಗೆಯೂ ಬಂಗಾಡಿ ಪರಿಸರದಲ್ಲಿ ಚರ್ಚೆಯಾಗುತ್ತಿದೆ.