ಕರ್ನಾಟಕದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ ಪೂಜಾರಿ
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ವೇಟ್‌ಲಿಫ್ಟರ್ ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಭಾರತ ಇದುವರೆಗೂ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದು, ಎಲ್ಲಾ ಪದಕಗಳೂ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬಂದಿವೆ.
ಮೀರಾಬಾಯಿ ಚಾನು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೆ. ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡ ಸಂಜಯ್ ಮಹದೇವ್ ಬರ್ಗರ್, ಬಿಂದ್ಯಾರಾಣಿದೇವಿ ಬೆಳ್ಳಿ ಪದಕ ಗೆದ್ದರು. ಇನ್ನು ಹೆಮ್ಮೆಯ ಕನ್ನಡಿಗೆ ಗುರುರಾಜ ಪೂಜಾರಿ ಪುರುಷರ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗುರುರಾಜ ಪೂಜಾರಿ ಒಟ್ಟು 269 ಕೆಜಿ (ಸ್ನ್ಯಾಚ್‌ನಲ್ಲಿ 118 ಕೆ.ಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 151 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು. ಮಲೇಷ್ಯಾದ ಅಜ್ನಿಲ್ ಬಿನ್ ಬಿದಿನ್ ಮುಹಮದ್ 285 ಕೆ.ಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದರೆ, ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಒಟ್ಟು 273 ಕೆ.ಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು.
ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿ ಕುಂದಾಪುರದವರು. ಆಗಸ್ಟ್ 15, 1992ರಂದು ಜನಿಸಿದರು. 2010ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ವೇಟ್‌ಲಿಫ್ಟಿಂಗ್ ಕ್ರೀಡಾಲೋಕಕ್ಕೆ ಪ್ರವೇಶಿಸಿದರು. ಆರಂಭದ ದಿನಗಳಲ್ಲಿ ಗುರುರಾಜ ಅವರು ಕುಸ್ತಿಪಟುವಾಗಿದ್ದರು, ನಂತರ ವೇಟ್‌ಲಿಫ್ಟಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
2015ರಲ್ಲಿ ಭಾರತೀಯ ವಾಯುಪಡೆಯಲ್ಲಿ ಸಾರ್ಜೆಂಟ್ ಆಗಿ ಸೇರಿದರು. 2016ರಲ್ಲಿ ರಾಷ್ಟ್ರೀಯ ಶಿಬಿರದಲ್ಲಿ ಗುರುತಿಸಿಕೊಂಡರು, ಅಲ್ಲಿಂದಲೇ ಅವರ ಯಶೋಗಾಥೆ ಆರಂಭವಾಯಿತು.
2016 ರಲ್ಲಿ ಮಲೇಷ್ಯಾ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಗುರುರಾಜ ಪೂಜಾರಿ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮತ್ತೊಂದು ಚಿನ್ನವನ್ನು ಗೆದ್ದರು.
2017ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. 2018ರ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ ಪೂಜಾರಿ ಶ್ರೇಷ್ಠ ಸಾಧನೆ ಮಾಡಿದರು. ಪೂಜಾರಿ 2018 ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.