ಪುಸ್ತಕವೇ ನಮ್ಮ ಸ್ನೇಹಿತ : ಶರೀಫ್ ಪಾಲೆಕ್ಕಾರ್
ಏತಡ್ಕ : ಗ್ರಂಥಾಲಯ ಎನ್ನುವುದು ನಮ್ಮ ಹತ್ತಿರದ ಸ್ನೇಹಿತ ಇದನ್ನು ನಾವು ಸಂದರ್ಶಿಸಿದಷ್ಟೂ, ಪ್ರೀತಿಸಿದಷ್ಟೂ, ನಮ್ಮ ಬೆಳವಣಿಗೆಯಾಗುತ್ತದೆ, ಲೋಕಜ್ಞಾನವು ಗ್ರಂಥಾಲಯದಲ್ಲಿ ಅಡಕವಾಗಿದೆ. ಮಾತ್ರವಲ್ಲದೆ ನಮ್ಮ ಜ್ಞಾನ ಭಂಡಾರ ವೃದ್ಧಿಗೆ ಇದು ಸಹಕಾರಿ, ಪುಸ್ತಕವನ್ನು ಸ್ನೇಹಿತನಂತೆ ಕಾಣಬೇಕು, ನಮ್ಮ ಜ್ಞಾನಭಂಡಾರವನ್ನು ವೃದ್ಧಿಸಿ, ಉತ್ತಮ ಪ್ರಜೆಯಾಗಬೇಕು, ಪುಸ್ತಕವೇ ನಮ್ಮ ಸ್ನೇಹಿತ ಪುಸ್ತಕವೇ ಲೋಕಜ್ಞಾನ ಎಂಬ ಹಿರಿಯರ ಮಾತಿನಂತೆ ಈಗಿನ ಯುವಪೀಳಿಗೆ ವುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ತೋರಿಸಬೇಕು ಎಂದು ಮೈತ್ರಿ ಗ್ರಂಥಾಲಯದ ಕಾರ್ಯದರ್ಶಿ, ಬದಿಯಡ್ಕ ವಿದ್ಯುತ್ ಇಲಾಖೆಯ ಮೇಲ್ವಿಚಾರಕ ಶರೀಫ್ ಪಾಲೆಕ್ಕಾರ್ ನುಡಿದರು.
ಅವರು ಕುಂಬಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ಮಕ್ಕಳ ವೇದಿಕೆಯ ಉದಯದೀಪಂ ಎಂಬ ಮಕ್ಕಳ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭದ ಅಭ್ಯಾಗತರಾಗಿ ಆಗಮಿಸಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಮಾತನಾಡಿ ಈ ಕೇಂದ್ರವು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಪೂರಕ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಂಥಾಲಯದ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ನರಸಿಂಹ ಭಟ್ ಕಟ್ಟದಮೂಲೆ ಶುಭಹಾರೈಸಿ ಮಾತನಾಡಿದರು. ನೆರೆದಿದ್ದ ಇತರ ಹಿರಿಯರು ಮಕ್ಕಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬೇಸಿಗೆ ರಜೆಯ ದಿನಗಳಲ್ಲಿ ಅತಿ ಹೆಚ್ಚು ಪುಸ್ತಕ ಓದಿದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಸ್ವಾಗತಿಸಿ, ವಂದಿಸಿದರು.