• November 22, 2024

ಶ್ರೀ ನಾರಾಯಣ ಗುರುಗಳು ಇಡೀ ಜಗತ್ತೇ ಸ್ವೀಕರಿಸಿದ ಮಹಾಗುರುಗಳು- ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ: ಗುರುಪೂಜಾ ಕಾರ್ಯಕ್ರಮ

 ಶ್ರೀ  ನಾರಾಯಣ ಗುರುಗಳು ಇಡೀ ಜಗತ್ತೇ ಸ್ವೀಕರಿಸಿದ ಮಹಾಗುರುಗಳು- ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ: ಗುರುಪೂಜಾ ಕಾರ್ಯಕ್ರಮ

 

ನಾರಾಯಣ ಗುರುಗಳು ಹಿಂದುಳಿದ ಸಮಾಜದ, ಕೆಳವರ್ಗದ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವುದರ ಮೂಲಕ ಅನುಕಂಪದ ಮೂರ್ತಿಯಾಗಿದ್ದರು.ವಿದ್ಯೆ ಮತ್ತು ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಿದವರು.ಆ ಮೂಲಕ ಇಡೀ ಜಗತ್ತಿನಿಂದ ಸ್ವೀಕರಿಸಲ್ಪಟ್ಟ ಮಹಾಗುರುಗಳಾಗಿದ್ದರು.ಆದ್ದರಿಂದ ನಾವು ವಿದ್ಯೆ ಮತ್ತು ಸಂಘಟನೆಯ ಶಕ್ತಿಯ ಮೂಲಕ ರಾಜಕೀಯ ಶಕ್ತಿಯನ್ನೂ ಕೂಡ ಪಡೆದು ಸಮಾಜದಲ್ಲಿ ಗುರುತಿಸುವಂತಾಗಬೇಕು ಮತ್ತು ಸಂಕುಚಿತ ಮನೋಭಾವ ಬಿಟ್ಟು ಮುಂದೆ ಬರಬೇಕೆಂದು ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಹೇಳಿದರು.ಅವರು ಯುವ ವಾಹಿನಿ ಸಂಚಲನಾ ಸಮಿತಿ, ಉಜಿರೆ ಮತ್ತು ಶ್ರೀ ಗುರುನಾರಾಯಣ ಸೇವಾ ಸಂಘ ಉಜಿರೆ ಇದರ ಜಂಟಿ ನೇತೃತ್ವದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಮಾತನಾಡಿ,ಗುರು ಪೂಜೆಯ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶ ಈಡೇರುತ್ತದೆ.ಜಾತಿ ಸಂಘಟನೆಗಳಿರುವುದು ಇತರ ಜಾತಿಗಳನ್ನು ತುಳಿಯುವುದಕ್ಕಲ್ಲ,ಬದಲಾಗಿ ನಮ್ಮ ಅಭಿವೃದ್ಧಿಗಾಗಿ ಎಂದರು.


ಕಾರ್ಯಕ್ರಮದಲ್ಲಿ ಉಜಿರೆ ಗ್ರಾ.ಪಂ.ಉಪಾಧ್ಯಕ್ಷರಾದ ರವಿಕುಮಾರ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿ,ಉಜಿರೆಯಲ್ಲಿ ಗುರುಮಂದಿರ ನಿರ್ಮಾಣ ಮಾಡುವ ನಮ್ಮ ಕನಸಿಗೆ ಎಲ್ಲರೂ ಸಹಕರಿಸಲು ಕೋರಿದರು.ಅತಿಥಿಗಳಾಗಿ ವೇದಿಕೆಯಲ್ಲಿ ಯುವ ವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಊರ,ಉಜಿರೆ ಘಟಕದ ಕಿಶೋರ್ ಪೆರ್ಲ,ಯುವ ಬಿಲ್ಲವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಎಂ.ಕೆ.ಪ್ರಸಾದ್,ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸಂಪತ್ ಸುವರ್ಣ,ಉಜಿರೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶ್ರೀಧರ ಪೂಜಾರಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತ,ಉಜಿರೆಯ ಸಿವಿಲ್ ಇಂಜಿನಿಯರ್ ಸೂರ್ಯನಾರಾಯಣ, ಗ್ರಾ.ಪಂ.ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್,ಸವಿತಾ,ನಾಗವೇಣಿ ಉಪಸ್ಥಿತರಿದ್ದರು.

ಉಜಿರೆ ಶ್ರೀ ಗುರುನಾರಾಯಣ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಬರಮೇಲು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ಪ್ರಜ್ಙಾ ಓಡಿನ್ನಾಳ ನಿರೂಪಿಸಿ,ಶಿಕ್ಷಕ ಸುರೇಶ್ ಮಾಚಾರ್ ಸ್ವಾಗತಿಸಿದರು. ಮನೋಜ್ ಕುಂಜರ್ಪ ಸಹಕರಿಸಿದರು.

Related post

Leave a Reply

Your email address will not be published. Required fields are marked *

error: Content is protected !!