• November 21, 2024

ಬೆಳ್ತಂಗಡಿ: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

 ಬೆಳ್ತಂಗಡಿ: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

 

ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ. ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಡಿ ವೀರೇಂದ್ರ ಹೆಗ್ಗಡೆಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಅ.2 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿದ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


ಸಂದೇಶ ನೀಡಿದ
ಧರ್ಮಗುರು ಹಾಗೂ ಪತ್ರಕರ್ತರಾಗಿರುವ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಕುಡಿತ ಎಂಬುದು ಎಲ್ಲಾ ಕೆಡುಕುಗಳಿಗೆ ಕಾರಣ ಎಂದು ಪ್ರವಾದಿ ಪೈಗಂಬರ್ ಕಲಿಸಿಕೊಟ್ಟಿದ್ದಾರೆ. ಆರ್ಥಿಕ ನಷ್ಟಕ್ಕಿಂತ ನೈತಿಕ ನಷ್ಟ ಬಹಳ ಅಪಾಯಕಾರಿ. ರೋಗದಿಂದ ವ್ಯಕ್ತಿ ಮಾತ್ರ ನೋವು ಅನುಭವಿಸಿದರೆ ಮದ್ಯಪಾನದಂತಹಾ ವ್ಯಸನದಿಂದ ಆತನ ಇಡೀ ಕುಟುಂಬ ಮತ್ತು ಸಮಾಜ ನೋವು ಅನುಭವಿಸಬೇಕಾಗುತ್ತದೆ. ಮೋದಿಯವರು ಹೆಗ್ಗಡೆಯವರನ್ನು ದೆಹಲಿಯ ರಾಜ್ಯ ಸಭೆಯವರೆಗೆ ಕೊಂಡೋಗಿದ್ದು, ಈ ಮದ್ಯವರ್ಜನ ಅಭಿಯಾನವನ್ನೂ ಅಲ್ಲಿಯವರೆಗೆ ಕೊಂಡೋಗಿ ಮದ್ಯಮುಕ್ತ‌ಭಾರತ, ಅಥವಾ ಕನಿಷ್ಟ ಮದ್ಯಮುಕ್ತ ಕರ್ನಾಟಕವನ್ನಾದರೂ ಕಾಣುವಂತಾಗಲಿ ಎಂದು ಆಶಿಸಿದರು.
ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರೆ. ಫಾ ಕ್ಲಿಫರ್ಡ್ ಪಿಂಟೋ ಸಂದೇಶ ನೀಡಿ, ಒಳ್ಳೆಯ ಕೆಲಸಕ್ಕೆ ನಾಳೆ ಎಂಬ ದಿನ ಇಡದೆ ಅದನ್ನು ಇವತ್ತಿನಿಂದಲೇ ಪ್ರಾರಂಭಿಸೋಣ. ನಮ್ಮಲ್ಲಿ ಹಗೆತನ ಇಲ್ಲದೆ ಶಾಂತಿ ನೆಲೆಸಬೇಕು. ಅದಕ್ಕಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. ನಾವು ನವ ಜೀವನ ಆರಂಭಿಸಬೇಕಾದರೆ ಮೊದಲು ನಮ್ಮ ತಪ್ಪಿನ ಅರಿವು ನಮಗೆ ಆಗಬೇಕು ಎಂದರು.

ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹಾ ಒಂದು‌ಒಳ್ಳೆಯ ಉದ್ಧೇಶಕ್ಕೆ ನಾವೆಲ್ಲಾ ಜೊತೆ ಸೇರಿದ್ದೇವೆ ಎಂಬುದೇ ಒಂದು ಸಂತೋಷದ ವಿಚಾರ‌. ಇಲ್ಲಿರುವ ಎಲ್ಲಾ ಧರ್ಮದ ಮುಖಂಡರೂ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರ ತತ್ವ ಮತ್ತು ಆದರ್ಶವನ್ನು ಪಾಲಿಸುತ್ತಿರುವ ಏಕೈಕ ಕ್ಷೇತ್ರವೆಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಖಾವಂದರು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ವಿಮಾ ವಿಭಾಗದ ಕೇಂದ್ರ ಕಚೇರಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಬೆಳ್ತಂಗಡಿ ವಿಭಾಗದ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸೀತಾರಾಮ ಆರ್., ಗುರುವಾಯನಕೆರೆ ವಿಭಾಗದ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ಬ್ಯಾಂಬೋ ಇಂಡಿಯಾ ನಿರ್ದೇಶಕ ಶ್ರೀಧರ್, ತಾಲೂಕಿನ ವಿವಿಧ ವಲಯಗಳ ವಲಯಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ನಾಮದೇವ ರಾವ್, ಪುಷ್ಪಾ ಆರ್ ಶೆಟ್ಟಿ, ಮೋಹನ್ ಗೌಡ, ಚಂದ್ರಶೇಖರ, ಪುರುಷೋತ್ತಮ, ವಸಂತ ಸುವರ್ಣ, ರಾಜೇಶ್ ಎಂ.ಕೆ, ರಾಜೇಂದ್ರ ಇಂದ್ರ, ಮೋಹನ್ ಅಂಡಿಂಜೆ, ಪ್ರಫುಲ್ಲಚಂದ್ರ, ಪ್ರಭಾಕರ ಗೌಡ ಪೊಸೊಂದೋಡಿ, ಪದ್ಮನಾಭ ಸಾಲಿಯಾನ್, ನಿತ್ಯಾನಂದ ನಾವರ, ನಾರಾಯಣ ಸಾಲ್ಯಾನ್, ಹರೀಶ್ ಸಾಲ್ಯಾನ್, ನೇಮಿರಾಜ್ ಸೀಮಿತ, ಶೌರ್ಯ ವಿಪತ್ತು ವಿಭಾಗದ ಯೋಜನಾಧಿಕಾರಿಗಳಾದ ಕಿಶೋರ್ ಮತ್ತು ಜಯವಂತ ಪಟಗಾರ ಉಪಸ್ಥಿತರಿದ್ದರು.

ಶ್ರೀ ಕ್ಷೇ.ಧ.ಗ್ರಾ.ಯೋ. ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗಾಂಧಿಸ್ಮೃತಿ ನಡೆಸಿಕೊಟ್ಟರು‌. ಗ್ರಾ.ಯೋಜನೆ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಧನ್ಯವಾದವಿತ್ತರು. ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ಪೂಜಾರಿ, ಈ ಸಮಾರಂಭದ ಠರಾವು ಮಂಡಿಸಿದರು.
ತಾಲೂಕಿನ ಆಯ್ದ ವಿಕಲಚೇತನರಿಗೆ ಈ ಸಮಾರಂಭದಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ನವಜೀವನ ಸಮಿತಿ‌ ಸದಸ್ಯರನ್ನು ಅಭಿ‌ನಂದಿಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!