ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ: ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆ
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಆಚರಿಸುತ್ತೇವೆ.
ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆ: ಜನಮೇಜಯ ರಾಜನ ತಂದೆ ಪರೀಕ್ಷಿತ. ಆತ ತಕ್ಷಕ ಎಂಬ ಸರ್ಪಗಳ ರಾಜ ಕಡಿದುದರಿಂದ ಸಾಯುತ್ತಾನೆ. ತನ್ನ ತಂದೆಯನ್ನು ಕೊಂದ ತಕ್ಷಕನ ಮೇಲಿನ ಸಿಟ್ಟಿಗಾಗಿ ಇಡೀ ಸರ್ಪ ಕುಲವನ್ನೇ ನಾಶ ಮಾಡುವುದಕ್ಕೆ ಜನಮೇಜಯ ಯಾಗವೊಂದನ್ನು ಶುರುಮಾಡುತ್ತಾನೆ. ಆ ಯಾಗದ ಅಗ್ನಿಕುಂಡ ದೊಳಗೆ ಸರ್ಪಗಳು ಬೀಳಲು ಆರಂಭವಾಗುತ್ತವೆ. ಆದರೆ ತಕ್ಷಕ ಮಾತ್ರ ಯಾಗದ ಅಗ್ನಿಕುಂಡಕ್ಕೆ ಬಂದು ಬೀಳುವುದಿಲ್ಲ. ಆತ ಎಲ್ಲಿದ್ದಾನೆ ಎಂದು ದಿವ್ಯ ದೃಷ್ಟಿಯ ಮೂಲಕ ನೋಡಿದಾಗ ಇಂದ್ರಲೋಕದಲ್ಲಿ ಇರುವುದು ಗೊತ್ತಾಗುತ್ತದೆ.
ತಕ್ಷಕ ಇಂದ್ರನ ಸಿಂಹಾಸನಕ್ಕೆ ಸುತ್ತಿ ಹಾಕಿಕೊಂಡು ಇರುತ್ತಾನೆ. ಇತ್ತ ಜನಮೇಜಯ ಕೈಗೊಂಡಿರುವ ಯಾಗದಲ್ಲಿ ಇಂದ್ರನ ಸಹಿತವಾಗಿ ಯಾಗದ ಅಗ್ನಿಕುಂಡಕ್ಕೆ ಬಂದು ಬೀಳುವಂತೆ ಮಂತ್ರ ಆರಂಭಿಸಲಾಗುತ್ತದೆ. ಆಗ ಹೆದರಿದ ಇಂದ್ರನು ಮಾನಸಾದೇವಿ ಬಳಿ ಹೋಗುತ್ತಾನೆ. ಮಾನಸಾದೇವಿ ಇಂದ್ರನನ್ನು ಕಾಪಾಡಲು ತನ್ನ ಮಗ ಆಸ್ತಿಕನನ್ನು ಕಳಿಸುತ್ತಾಳೆ. ಆಸ್ತಿಕನು ಜನಮೇಜಯನ ಯಾಗ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಏನು ಕೋರಿದರೂ ನೀಡುವುದಾಗಿ ಜನಮೇಜಯ ಮಾತು ಕೊಡುತ್ತಾನೆ. ಆಗ ಆಸ್ತಿಕನು ಯಾಗವನ್ನು ನಿಲ್ಲಿಸಲು ಕೇಳುತ್ತಾನೆ. ಕೊಟ್ಟ ಮಾತಿನಂತೆ ಜನಮೇಜಯ ಯಾಗವನ್ನು ನಿಲ್ಲಿಸುತ್ತಾನೆ. ಇದರಿಂದ ನಾಗ ಸಂಕುಲ ಉಳಿದ ಆ ದಿನದ ಸ್ಮರಣೆಗಾಗಿ ನಾಗಸಂಕುಲಕ್ಕೆ ನಾಗರ ಪಂಚಮಿ ಆಚರಿಸಲಾಗುತ್ತದೆ.