ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಇದೆ ಎಂದು ವಸಂತ ಬಂಗೇರ ಆರೋಪ ಪ್ರಕರಣ: ಜನರಿಂದ ಆಯ್ಕೆಯಾದ ಶಾಸಕ ನಾನಿರುವಾಗ ಇನ್ಯಾರೋ ಬಂದು ಅಧಿಕಾರಿಗಳನ್ನು ನಿಂದಿಸುವುದು ಸರಿಯಲ್ಲ: ಹರೀಶ್ ಪೂಂಜ
ಬೆಳ್ತಂಗಡಿ: ಮಾಜಿ ಶಾಸಕರಾದ ಕೆ ವಸಂತ ಬಂಗೇರ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು, ಸಿಬ್ಬಂದಿಗಳನ್ನು ನಿಂದಿಸುವುದು , ತಹಶೀಲ್ದಾರ್ ಸಹಿತ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುವುದು ಮತ್ತಿತರ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಜನಪ್ರತಿನಿಧಿ ಅಲ್ಲದವರು ಅಧಿಕಾರ ಚಲಾಯಿಸುವಾಗ ಅಧಿಕಾರಿಗಳು ಅಸಹಾಯಕರಾಗುತ್ತಾರೆ.ಅಧಿಕಾರಿಗಳಿಗೆ ಅವರದ್ದೇ ಆದ ವೃತ್ತಿ ಗೌರವವಿರುತ್ತದೆ. ಕಾಂಗ್ರೆಸ್ ಸರ್ಕಾರ ಇದೆ ಎಂಬ ಮಾತ್ರಕ್ಕೆ ಅಧಿಕಾರಿಗಳನ್ನ ಬೈಯುವುದು ಸರಿಯಲ್ಲ ಬಯ್ಯುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂಬುವುದು ಭ್ರಮೆ. ಎಲ್ಲ ದುರಹಂಕಾರಕ್ಕೆ ಕೊನೆ ಇದ್ದೇ ಇದೆ ಸೂಕ್ತ ಸಮಯ ಸಂದರ್ಭ ಬಂದಾಗ ಜನರೇ ಉತ್ತರ ನೀಡುತ್ತಾರೆ ಎಂದು ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಸೇವೆ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಯಾವೊಬ್ಬ ರೋಗಿಯು ದೂರಿದ್ದನ್ನು ನಾನು ನೋಡಿಲ್ಲ. ಅಲ್ಲಿರುವ ಸಿಬ್ಬಂದಿ ಹಾಗೂ ರೋಗಿಗಳ ಮಧ್ಯೆ ಇರುವ ಗೊಂದಲವೇ ಹೊರತು ಬೇರೆ ಯಾವುದೇ ಸಮಸ್ಯೆಗಳಿಲ್ಲ. ಜನರಿಂದ ಆಯ್ಕೆಯಾದ ಶಾಸಕರಿರುವಾಗ ಇನ್ಯಾರೋ ಬಂದು ಅಧಿಕಾರಿಗಳನ್ನು ನಿಂದಿಸುವುದು ಸರಿಯಲ್ಲ. ನನ್ನ ಹಕ್ಕುಗಳಿಗೆ ಚ್ಯುತಿಯಾದ ಸಂದರ್ಭ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಯಾದಾಗ ಹಕ್ಕುಚ್ಯುತಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.