ಮಳೆಯಿಂದ ಕೊಚ್ಚಿಹೋದ ಕಿರುಸೇತುವೆಗಳನ್ನು ಮರು ನಿರ್ಮಿಸಿದ ನೂರಾರು ಕಾರ್ಯಕರ್ತರು :ನೊಂದ ಜೀವಗಳಿಗೆ ಧೈರ್ಯ ತುಂಬಿದ ಸಂಘಟನೆಗಳು

ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುಷ್ಪಗಿರಿ ಬೆಟ್ಟದ ಸಾಲುಗಳಲ್ಲಿ ಜಲಸ್ಫೋಟವಾಗಿ ದಕ್ಷಿಣಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮಗಳಾದ ಸುಳ್ಯ ಮತ್ತು ಕಡಬ ತಾಲೂಕಿನ ಕಲ್ಮಕಾರು, ಕೊಲ್ಲಮೊಗರು, ಬಾಳುಗೋಡು, ಹರಿಹರ, ಐನೇಕಿದು ಗ್ರಾಮಗಳಲ್ಲಿನ ಜನರ ಪಾಡು ತೀರ ಕಷ್ಟಕರವಾಗಿದೆ.
ಹಳ್ಳಕೊಳ್ಳಗಳ ಭೋರ್ಗರೆತಕ್ಕೆ ತುತ್ತಾಗಿ ಅನೇಕ ಸೇತುವೆ, ಕಿರುಸೇತುವೆಗಳು ಮನೆಗಳು ಕೊಚ್ಚಿಹೋಗಿ ಗ್ರಾಮವಾಸಿಗಳಿಂದ ಹೊರಜಗತ್ತು ಸಂಪರ್ಕವೇ ಕಡಿದುಕೊಂಡಿದ್ದ ಸಂಧರ್ಭದಲ್ಲಿ “ಸೇವಾ ಹೀ ಸಂಘಟನ್” ಅನ್ನೋ ಧ್ಯೇಯವಿಟ್ಟು ಕಳೆದೊಂದು ವಾರದಿಂದ ರಾತ್ರಿ ಹಗಲು ಎನ್ನದೇ ಯಾವುದೇ ಪ್ರತಿಫ಼ಲಾಪೇಕ್ಷೆ ಇಲ್ಲದೇ ನೂರಾರು ಸಂಘದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಪ್ರವಾಹದಿಂದ ನೆರವಿನ ನಿರೀಕ್ಷೆಯಲ್ಲಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹೆಗಲಿಗೆ ಹೆಗಲು ನೀಡುವ ಕೆಲಸ ಸಂಘದ ಕಾರ್ಯಕರ್ತರಿಂದ ನಡೆಯುತ್ತಿದೆ.
ಗುಂಡಡ್ಕ, ಕೊತ್ನಡ್ಕ, ಬಾಳುಗೋಡು, ಹರಿಹರ, ಬೆಂಡೋಡಿ, ಕೊಲ್ಲಮೊಗರು, ಕಲ್ಮಕಾರು ಹೀಗೆ ಹತ್ತಾರು ಗ್ರಾಮೀಣ ಭಾಗದ ಸೇತುವೆಗಳ ಮೇಲೆ ಪ್ರವಾಹದ ನೀರು ಹೊತ್ತು ತಂದು ಹಾಕಿದ್ದ ಸಿಗಿದ ಮರಗಳು, ಬಂಡೆಕಲ್ಲುಗಳನ್ನು ಸರಿಸಿ ತಾತ್ಕಾಲಿಕವಾಗಿ ಸಂಚಾರ ಯೋಗ್ಯವನ್ನಾಗಿ ಮಾಡುವುದು, ಮಣ್ಣುಕುಸಿತಕ್ಕೊಳಗಾಗಿದ್ದ ತಪ್ಪಲಿನಲ್ಲಿದ್ದ ಅನೇಕ ಮನೆಗಳನ್ನು ವಾಸಯೋಗ್ಯಮಾಡುವ ಕಾರ್ಯ ಈ ಕ್ಷಣದ ವರೆಗೂ ನಿರಂತರವಾಗಿ ನಡೆಯುತ್ತಿದೆ.
ನಿನ್ನೆ ಮುಂಜಾನೆಯಿಂದ ಪುಷ್ಪಗಿರಿ ತಪ್ಪಲಿನಲ್ಲಿರುವ ಉಪ್ಪುಕಳ ಅನ್ನೋ ಪುಟ್ಟ ಊರಿನ ಸಂಪರ್ಕದ ಕೊಂಡಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದನ್ನು ಅರಿತ ಸೇವಾಭಾರತಿ ತಂಡ ಕಾಡುತ್ಪತ್ತಿಗಳನ್ನು ಬಳಸಿ ಆ ಭಾಗದ ಸುಮಾರು 14 ಕುಟುಂಬಗಳನ್ನು ಊರಿಗೆ ಸಂಪರ್ಕಿಸುವುದಕ್ಕಾಗಿ ಸಂಘದ ಕಾರ್ಯಕರ್ತರು ತಾತ್ಕಾಲಿಕ ಸೇತುವೆಯನ್ನು ಅತ್ಯಂತ ತ್ವರಿತವಾಗಿ ನಿರ್ಮಿಸಿಕೊಡುವ ಮೂಲಕ ಆ ಭಾಗದ ಜನತೆಗೆ ಸಮಾಜ ತಮ್ಮೊಂದಿಗೆ ಇದೆ ಅನ್ನೋ ಆತ್ಮವಿಶ್ವಾಸ ಹೆಚ್ಚಿಸೋ ಕೆಲಸ ಮಾಡಿದೆ.