ಧರ್ಮ ಯಾವತ್ತೂ ಉದ್ಯಮವಾಗಬಾರದು: ಶ್ರೀಧರ ಜಿ ಭಿಡೆ:ಆಂಜನೇಯ ಬೆಟ್ಟದಲ್ಲಿ ಶ್ರೀ ರಾಮಾಂಜನೇಯ ಮತ್ತು ಸತ್ಯನಾರಾಯಣ ಪೂಜೆ
ಕಡಿರುದ್ಯಾವರ : ಧರ್ಮ ಮಾನವ ಕುಲವನ್ನು ಎತ್ತರಿಸಬೇಕು. ಅಲ್ಲಿ ಎಲ್ಲರೂ ಮೆಚ್ಚಿಕೊಂಡು ಬಂದು ಮುಕ್ತವಾಗಿ ತೊಡಗಿಸಿಕೊಳ್ಳುವಂತಾಗಬೇಕು. ದೇವಾಲಯಗಳು ಯಾವತ್ತೂ ಧರ್ಮೋಧ್ಯಮವಾಗಬಾರದು ಎಂದು ಭಿಡೆ ಮನೆಯ ಹಿರಿಯ ಮುತ್ಸದ್ದಿ, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ಹೇಳಿದರು.
ಕಡಿರುದ್ಯಾವರ ಗ್ರಾಮದ ಆಂಜನೇಯ ಬೆಟ್ಟದಲ್ಲಿ, ಶ್ರೀ ರಾಮಾಂಜನೇಯ ದೇವಸ್ಥಾನ ಮತ್ತು ಭಜನಾ ಮಂಡಳಿ ಇದರ ವತಿಯಿಂದ ಮಕರ ಸಂಕ್ರಮಣದಂದು ಶ್ರೀ ಆಂಜನೇಯ ದೇವರ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ಮತ್ತು ಧರ್ಮಸಹಕಾರಿಗಳಿಗೆ ಗೌರವಾರ್ಪಣೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕುರುಡ್ಯ ಕುಟುಂಬಸ್ಥರ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಕೆ.ಎ ಜಯಚಂದ್ರ ವಹಿಸಿದ್ದರು.
ಸಮಾರಂಭದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಅನಂತ ರಾವ್ ಚಾರ್ಮಾಡಿ, ಉಮೇಶ್ ಗೌಡ ಕೌಡಂಗೆ, ಯಂಗ್ ಚಾಲೆಂಜರ್ಸ್ ಸಂಸ್ಥಾಪಕ ನಾಮದೇವ ರಾವ್, ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಜೈನ್, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಲೋಕೇಶ್ವರೀ ವಿಜಯಚಂದ್ರ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ನಿವೃತ್ತಿ ಶಿಕ್ಷಕಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಕೆ.ಎ ರೋಹಿಣಿ ಅವರನ್ನು ಸನ್ಮಾನಿಸಲಾಯಿತು. ಆಂಜನೇಯ ಕ್ಷೇತ್ರದದ ಎಲ್ಲಾ ಧರ್ಮ ಕಾರ್ಯಗಳಲ್ಲಿ ಸಹಕಾರಿಯಾಗುತ್ತಿರುವ ಬಾಬು ಗೌಡ, ವಿಶ್ವನಾಥ ಶೆಟ್ಟಿ ಮುಂಡ್ರುಪ್ಪಾಡಿ, ನೀಲಪ್ಪ ಸಾಲಿಯಾನ್, ಶೀನಪ್ಪ ಗೌಡ ಪುಣ್ಕೆದಡಿ, ಅಣ್ಣು ಮುಗೇರ, ವಿಶ್ವನಾಥ ಗೌಡ ಬರಮೇಲು, ಕೃಷ್ಣ ಗೌಡ ಬರಮೇಲು, ಬಾಬು ಗೌಡ ಉದ್ದದಪಲ್ಕೆ ಮತ್ತು ಧರ್ಣಪ್ಪ ಸಾಲಿಯಾನ್ ಇವರನ್ನು ಗೌರವಿಸಲಾಯಿತು.
ಕ್ಷೇತ್ರದ ಆರಂಭಿಕರಾದ ನಿವೃತ್ತ ಶಿಕ್ಷಕ ಎಂ.ಸಂಜೀವ ಮಾಸ್ಟರ್ ಕುರುಡ್ಯ ಸಂಸ್ಮರಣಾರ್ಥ ಭಜನಾ ಕಾರ್ಯಕ್ರಮ ನಡೆಯಿತು.
ಗಣಹೋಮ, ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎನ್.ಎಸ್ ಗೋಖಲೆ, ಬಾಲಕೃಷ್ಣ ಶೆಟ್ಟಿ, ಮುದರ ನಾಯ್ಕ, ಗುರುಪ್ರಸಾದ್ ಕಾನರ್ಪ, ಪುನೀತ್ ರಾಜ್ ಕುಮಾರ್ ಸ್ಮರಣೆಯೊಂದಿಗೆ ಮಂಗಳೂರಿನ ಲಕುಮಿ ತಂಡದ ಕಲಾವಿದರಿಂದ “ಅವು ದಾಲಾಪುಜ್ಜಿ” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಆಹ್ವಾನಿತ ಗಣ್ಯರನ್ನು ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ಕಿಶೋರ್ ಕುಮಾರ್ ಮತ್ತು ರೇಷ್ಮಾ ಕಿಶೋರ್, ಸಹೋದರ ಕಿರಣ್ ಕುಮಾರ್ ಮತ್ತು ಮೀನಾಕ್ಷಿ ಕಿರಣ್ ದಂಪತಿ ಆದರದಿಂದ ಬರಮಾಡಿಕೊಂಡು ಗೌರವಿಸಿದರು. ಜಯರಾಂ ಕೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೂಜಾರಿ ದೂಂಬೆಟ್ಟು, ಉದಯ ಗೌಡ ಸಹಿತ ಸ್ವಯಂ ಸೇವಕರ ತಂಡ ಕಾರ್ಯಕ್ರಮದುದ್ದಕ್ಕೂ ಸಹಕಾರ ನೀಡಿದರು. ವಿತೇಶ್ ಸನ್ಮಾನಿತರ ಪರಿಚಯ ಮಂಡಿಸಿದರು.