ಪುಂಜಾಲಕಟ್ಟೆ: ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ಪ್ರಕರಣ: ಪುಂಜಾಲಕಟ್ಟೆ ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ
ಪುಂಜಾಲಕಟ್ಟೆ: ಸಿವಿಲ್ ವ್ಯಾಜ್ಯ ಸಂಬಂಧ ವಕೀಲರೊಬ್ಬರ ಮೇಲೆ ಕೇಸ್ ದಾಖಲಿಸಿ ಹಲ್ಲೆ ನಡೆಸಿದ ಪುಂಜಾಕಟ್ಟೆಯ ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮುಂದೆ ಇಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಾಗಿ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿರುವ ನಿರ್ದೇಶನವು ಕೇವಲ ಕಾಗದಕ್ಕೆ ಸೀಮಿತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯ ಸಬ್‌ಇನ್ಸ್‌ಪೆಕ್ಟರ್ ಕೆ.ಪಿ. ಸುತೇಶ್ ಅವರು ತಮ್ಮ ಮೇಲೆ ಕಾನೂನುಬಾಹಿರವಾಗಿ ಹಲ್ಲೆ ನಡೆಸಿದ್ದಾರೆ. ಹಾಗಾಗಿ ತಮಗೆ ಪರಿಹಾರ ನೀಡಲು ಮತ್ತು ಪ್ರಕರಣ ಕುರಿತು ಇಲಾಖಾ ವಿಚಾರಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ವಕೀಲ ಕುಲದೀಪ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಪೊಲೀಸರು ಹೆಚ್ಚಾಗಿ ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಬಂಧಿಸುವ ಅಧಿಕಾರ ನೀಡಿದ್ದರಿಂದ ಭ್ರಷ್ಟರಾಗುವ ಅಧಿಕಾರ ನೀಡಿದಂತಾಗಿದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಮಾರ್ಮಿಕವಾಗಿ ನುಡಿದರು.
ಅಂತಿಮವಾಗಿ ಕುಲದೀಪ್ ಅವರ ಮೂಲಭೂತ ಹಕ್ಕು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರ ನ್ಯಾಯಾಲಯದ ಮುಂದಿದೆ. ಕುಲದೀಪ್‌ಗ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೊಲೀಸರಿಂದ ವಸೂಲಿ ಮಾಡಬೇಕು. ಪರಿಹಾರಕ್ಕೆ ಸಂಬಂಧಿಸಿದ ಆದೇಶವನ್ನು ನಂತರ ಬರೆಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ ಆ ಕುರಿತ ಆದೇಶವನ್ನು ಕಾಯ್ದಿರಿಸಿದೆ.
ಪ್ರಕರಣದ ಹಿನ್ನೆಲೆ
ಬಂಟ್ವಾಳ ತಾಲೂಕಿನ ದೇವಸ್ಯ ಮೂಡೂರು ಗ್ರಾಮದ ವಸಂತ ಗೌಡ ಎನ್ನುವವರು, ತಮ್ಮ ವರ್ಗ ಜಾಗದಲ್ಲಿದ್ದ ಕಬ್ಬಿಣದ ಗೇಟ್ ಅನ್ನು ಯುವ ವಕೀಲ ಕುಲದೀಪ್ ಶೆಟ್ಟಿ ಕದ್ದೊಯ್ದಿದ್ದಾರೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳ್ಳತನದ ಪ್ರಕರಣವನ್ನು ಪುಂಜಾಲಕಟ್ಟೆ ಪೋಲಿಸರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸುತೇಶ್ ನೇತೃತ್ವದ ತಂಡ ಕುಲದೀಪ್ ಶೆಟ್ಟಿ ಮನೆಗೆ ತೆರಳಿ ಕುಲದೀಪ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ವೇಳೆ ಪೊಲೀಸರು ಮತ್ತು ಕುಲದೀಪ್ ನಡುವೆ ವಾಗ್ವಾದ ನಡೆದಿದೆ. ಕುಲದೀಪ್ ನನ್ನು ಅರೆಬೆತ್ತಲಾಗಿ ಪೊಲೀಸ್ ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿ, ಕುಲದೀಪ್ ತಾಯಿ ಪೊಲೀಸ್ ವಾಹನಕ್ಕೆ ಅಡ್ಡ ಹಾಕಿದ್ದರು. ಈ ಘಟನೆಯ ವಿಡಿಯೋವನ್ನು ಕುಲದೀಪ್ ಸಹೋದರ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲೆಯ ವಕೀಲ ಸಮೂಹ ಪೊಲೀಸ್ ಅಧಿಕಾರಿ ಸುತೇಶ್ ವಿರುದ್ಧ ತಿರುಗಿ ಬಿದ್ದಿದ್ದರು ಮಂಗಳೂರು ನ್ಯಾಯಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯದಲ್ಲಿ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣ ಸಿವಿಲ್ ವಿಚಾರ ಆಗಿರುವುದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಯುವ ವಕೀಲನನ್ನು ಅರೆಬೆತ್ತಲೆ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು. ವಕೀಲರ ಒತ್ತಾಯಕ್ಕೆ ಮಣಿದು ಸರ್ಕಾರ ಸಬ್ ಇನ್ಸ್‌ಪೆಕ್ಟರ್ ಸುತೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಡಳಿತಾತ್ಮಕ ಕಾರಣ ನೀಡಿ ವರ್ಗಾಯಿಸಿತ್ತು.ಬಳಿಕ ಸುತೇಶ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು.