ಮತದಾನದ ದಿನ ಕೈ ಬೆರಳಿಗೆ ಹಾಕೋ ನೀಲಿ ಶಾಯಿ ಇಲ್ಲೇ ತಯಾರಾಗೋದು!
ಮತದಾನದ ದಿನ ಕೈ ಬೆರಳಿಗೆ ಶಾಯಿ ಹಾಕೋದನ್ನ ನಾವೆಲ್ಲ ನೋಡಿದ್ದೀವಿ. ಅಂತಹ ನೀಲಿ ಶಾಯಿ (Election Link) ನಮ್ಮೂರ ಮೈಸೂರಲ್ಲೇ ತಯಾರಾಗುತ್ತೆ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹೌದು, ಮೈಸೂರು ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಸ್ವಾತಂತ್ರ್ಯ ಪೂರ್ವದಲ್ಲೇ ತಯಾರಿಸಿದ್ದ ಈ ಸಂಸ್ಥೆಯೇ ಇಂದು ದೇಶಾದ್ಯಂತ ಶಾಯಿ ಪೂರೈಕೆ ಮಾಡುತ್ತಿದೆ. ಈ ಬಾರಿಯ ಚುನಾವಣೆಯೂ ಮೈಸೂರಿನ ಪೇಂಟ್ಸ್ ಆಂಡ್ ವಾರ್ನಿಷ್ ಸಂಸ್ಥೆ ಇಂಕಿನ ಶಾಯಿ ಪೂರೈಸಿದೆ.
ಇಲ್ಲಿಂದ್ಲೇ ಪೂರೈಕೆ!
ಪ್ರತಿ ಎಲೆಕ್ಷನ್ ಬಂದಾಗ್ಲೂ ಮೈಸೂರು ನಗರದಲ್ಲಿರುವ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು ನೀಲಿ ಇಂಕಿನ ಶಾಯಿಯನ್ನು ಪೂರೈಸುವ ಚಟುವಟಿಕೆಯಲ್ಲಿ ತೊಡಗುತ್ತದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲ ರಾಜ್ಯಗಳಿಗೆ ಇಲ್ಲಿಂದಲೇ ಕೈ ಬೆರಳಿಗೆ ಹಾಕುವ ಶಾಯಿ ಪೂರೈಕೆ ಆಗುತ್ತದೆ.
ಅಳಿಸಲಾಗದ ಶಾಯಿಯ ಗುರುತು!
ಈ ಬಾರಿಯ ಲೋಕಸಭಾ ಚುನಾವಣೆಗೆ 10 ಎಂಎಲ್ ಪ್ರಮಾಣದ ಒಟ್ಟು 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ಸಂಸ್ಥೆಯು ತಯಾರಿಸಿ ಪೂರೈಕೆ ಮಾಡಿದೆ. 10 ಎಂಎಲ್‌ನ ಒಂದು ಬಾಟಲಿಯಿಂದ ಒಟ್ಟು 700 ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಬಹುದಾಗಿದೆ.
ಪೂರೈಕೆ ಆರಂಭ
ದೂರದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಲ್ಯಾಂಡ್, ಮಿಜೋರಾಂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಿಗೆ ಈಗಾಗಲೇ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ.
1937ರಲ್ಲಿ ಅಂದಿನ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದಾಗಿದೆ. ವಿದೇಶಿ ಚುನಾವಣೆಗೂ ಇಲ್ಲಿನ ಶಾಯಿ ಪೂರೈಕೆ ಆಗಿರುವುದು ವಿಶೇಷ. ಒಟ್ಟಿನಲ್ಲಿ ಅಳಿಸಲಾಗದ ಶಾಯಿ ಪೂರೈಕೆ ನಮ್ಮದೇ ಮೈಸೂರಿನಿಂದ ಆಗುತ್ತಿದೆ ಅನ್ನೋದು ನಮ್ಮೆಲ್ಲರ ಹೆಮ್ಮೆ.