ಗುರುವಾಯನಕೆರೆ ಮಸ್ಜಿದ್ ನಲ್ಲಿ ಉರೂಸ್ ಪ್ರಯುಕ್ತ 11 ಜೋಡಿ ಸಾಮೂಹಿಕ ವಿವಾಹ
ಬೆಳ್ತಂಗಡಿ; ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಗುರುವಾಯನಕೆರೆ ಇಲ್ಲಿ ಉರೂಸ್ ಪ್ರಯುಕ್ತ 11 ಜೋಡಿ ಸರಳ ಸಾಮೂಹಿಕ ವಿವಾಹ ಫೆ.5 ರಂದು ಜರುಗಿತು.
ಅಧ್ಯಕ್ಷತೆಯನ್ನು ದರ್ಗಾ ಸಮಿತಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು ವಹಿಸಿದ್ದರು.
ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಉಸ್ಮಾನ್ ಶಾಫಿ, ಗುರುವಾಯನಕೆರೆ ಮೊಹಲ್ಲಾದ ಅಂಗ ಸಂಸ್ಥೆಗಳ ಮತ್ತು ಜಮಾಅತ್ ಗಳ ಅಧ್ಯಕ್ಷ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಅಸ್ಸಯ್ಯಿದ್ ಸಾದಾತ್ ತಂಙಳ್ ವಿವಾಹ ಸಮಾರಂಭದ ನೇತೃತ್ವ ವಹಿಸಿದ್ದರು. ಪ್ರಥಮ ನಿಕಾಹ್ ಅನ್ನು ಬೆಳ್ತಂಗಡಿ ದಾರುಸ್ಸಲಾಂ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೆರವೇರಿಸಿದರು.
ಮದ್ದಡ್ಕ ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಹಸನ್ ಮುಬಾರಕ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು.
11 ಜೋಡಿ ಗೃಹಸ್ಥಾಶ್ರಮಕ್ಕೆ;
ಈ ಬಾರಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಜಮಾಅತ್ ಮತ್ತು ಆಸುಪಾಸಿನ ಅರ್ಹ ಕುಟುಂಬದ 11 ಮಂದಿ ಯುವತಿಯರನ್ನು ಆಯ್ಕೆಗೊಳಿಸಿ ಈ ಪುಣ್ಯ ಕಾರ್ಯ ನೆರವೇರಿಸಿಕೊಡಲಾಯಿತು. ಎಲ್ಲಾ 11 ಮಂದಿ ವರರಿಗೆ ಒಂದು ಜೊತೆ ವಸ್ರ್ತ, ವಧುಗಳಿಗೆ ಒಂದು ಸರ, ಒಂದು ಜೊತೆ ಕಿವಿಯೋಲೆ ಮತ್ತು ಉಂಗುರ ಸೇರಿ 4 ಪವನ್ ಚಿನ್ನಾಭರಣ ಹಾಗೂ ನಮಾಝ್ ವಸ್ರ್ತ ದಾನವಾಗಿ ನೀಡಲಾಯಿತು.
ಮದುವೆಯ ಎಲ್ಲಾ ಖರ್ಚು ವೆಚ್ಚಗಳನ್ನು ಜಮಾಅತ್ ಮತ್ತು ದಾನಿಗಳು ನೆರವಿನಿಂದ ನಡೆಸಿಕೊಡಲಾಯಿತು.
ಸಮಾರಂಭದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ದಾವೂದ್ ಜಿ.ಕೆ, ಕೋಶಾಧಿಕಾರಿ ಮುತ್ತಲಿಬ್, ದರ್ಗಾ ಸಮಿತಿ ಕಾರ್ಯದರ್ಶಿ ಮುಹಮ್ಮದ್ ರಫಿ, ಕೋಶಾಧಿಕಾರಿ ಹಮೀದ್ ಮಿಲನ್, ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ, ಮುದರ್ರಿಸ್ ಆದಂ ಅಹ್ಸನಿ, ಸದರ್ ನಾಸಿರ್ ಸಖಾಫಿ, ದರ್ಗಾ ಕಮಿಟಿ ಮೆನೇಜರ್ ಆದಂ ಸಾಹೇಬ್, ಜಮಾಅತ್ ಕಚೇರಿ ಮೆನೇಜರ್ ಮುಹಮ್ಮದ್ ಇರ್ಶಾದ್ ಹಮ್ದಾನಿ ಸಹಿತ ಆಡಳಿತ ಸಮಿತಿ, ದರ್ಗಾ ಸಮಿತಿ, ದ್ಸಿಕ್ರ್ ಮತ್ತು ಸ್ವಲಾತ್ ಕಮಿಟಿ ಪದಾಧಿಕಾರಿಗಳು, ಜಮಾಅತ್ ಮತ್ತು ಅಂಗ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಉದ್ಯಮಿ ಹಸೈನಾರ್ ಶಾಫಿ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 5 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.