ತೀವ್ರ ಜಾಂಡೀಸ್ ಖಾಯಿಲೆಗೆ ತುತ್ತಾದ ಯುವಕನ ಚಿಕಿತ್ಸೆಗೆ ಜಡಿ ಮಳೆಯಲ್ಲೂ ದೇಣಿಗೆ ಸಂಗ್ರಹಿಸುತ್ತಿರುವ ಇಬ್ಬರು ವಿದ್ಯಾರ್ಥಿಗಳು
ಇದು ಕೇರಳದ ತಿರುವಣ್ಣಾಯ ಟೋಲ್ ಗೇಟಿನ ಹತ್ತಿರ ಇಂದು ಕಂಡು ಬಂದ ದೃಶ್ಯ. ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಇಬ್ಬರು ವಿದ್ಯಾರ್ಥಿನಿಯರು ಮಾನವೀಯತೆಯ ಹಾಗೂ ಸೌಹಾರ್ದತೆಯ ಮುಖವೊಂದನ್ನು ಜಗತ್ತಿನ ಮುಂದೆ ತೆರೆದಿಟ್ಟ ಹೃದಯಂಗಮ ಸಂದರ್ಭ.
ಸ್ಥಳೀಯ ಕೋಟಕ್ಕಲ್ ನಿವಾಸಿ ಬಿಪಿನ್( ಪಾಲೇರಿ ಗೋಪಿ ಎಂಬವರ ಪುತ್ರ) ಕೆಲ ತಿಂಗಳುಗಳ ಹಿಂದೆ ಉದ್ಯೋಗಕ್ಕೆಂದು ಗಲ್ಫ್ ರಾಷ್ಟ್ರವೊಂದಕ್ಕೆ ತೆರಳಿದ್ದ. ಆದರೆ ಅಲ್ಲಿ ತಲುಪಿದ ಕೆಲ ದಿನಗಳಲ್ಲೇ ಆತ ಜಾಂಡೀಸ್ ಕಾಯಿಲೆಗೆ ತುತ್ತಾದ. ರೋಗದ ಪ್ರಖರತೆ ಎಷ್ಟಿತ್ತೆಂದರೆ ಆತನ ಕರುಳು ಸಂಪೂರ್ಣವಾಗಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಿತು. ಕರುಳಿನ ಶಸ್ತ್ರ ಚಿಕಿತ್ಸೆಗೆ ಕನಿಷ್ಟ ಎಂದರೆ 30 ಲಕ್ಷ ವೆಚ್ಚವಾಗುತ್ತೆ ಎಂದು ವೈದ್ಯರು ತಿಳಿಸಿದರು. ಈ ನಡುವೆ ಬಿಪಿನ್ ನ ಸಹೋದರನೋರ್ವನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮೃತಪಟ್ಟನು. ಬಿಪಿನ್ ನನ್ನು ಉಪಚರಿಸುತ್ತಿದ್ದ ಏಕ ಸಹೋದರಿಗೂ ಕರುಳಿನ ರೋಗ ಭಾದಿಸಿತು. ಚಿಕಿತ್ಸೆಗಾಗಿ ಸ್ವಂತ ಸೂರನ್ನು ಸಹ ಕಳೆದುಕೊಂಡು ಅಸಹಾಯಕನಾಗಿದ್ದ ಬಿಪಿನ್ ಗಾಗಿ ಊರಿನವರ ಹೃದಯ ಮಿಡಿಯಿತು. ಎಲ್ಲರೂ ಒಂದಾಗಿ ಹಣಕಾಸಿನ ನೆರವು ಹೊಂದಿಸಿ ಆತನನ್ನು ರಕ್ಷಿಸುವ ಪಣ ತೊಟ್ಟರು. ಈ ಪ್ರಕಾರ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಬಿಪಿನ್’ನ ಪ್ರಾಣ ಉಳಿಸಲು ವೀಡಿಯೋ ದೃಶ್ಯದಲ್ಲಿ ಕಾಣುವ ಈ ವಿದ್ಯಾರ್ಥಿನಿಯರೂ ಜಡಿಮಳೆಯನ್ನು ಲೆಕ್ಕಿಸದೆ ದೇಣಿಗೆ ಸಂಗ್ರಹದಲ್ಲಿ ನಿರತರಾದರು.