ಉಪ್ಪಿನಂಗಡಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಎಂಟು ತಿಂಗಳ ಕಂದ ಸಾವು: ಪತಿ ಮೇಲೆ ಪತ್ನಿ ಪೊಲೀಸರಿಗೆ ದೂರು
ಉಪ್ಪಿನಂಗಡಿ: ಜ್ವರದಿಂದ ಬಳಲುತ್ತಿದ್ದ ಎಂಟು ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡದಿದೆ.
ಮಗುವಿನ ಸಾವಿಗೆ ಪತಿಯೇ ಕಾರಣ ಎಂದು ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ನೆಕ್ಕಿಲಾಡಿ ಗ್ರಾಮದ ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಪುತ್ರ ಎಂಟು ತಿಂಗಳ ಕಂದ ಜೀವಿತ್ ತೀವ್ರ ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.1 ರಂದು ಸಾವನ್ನಪ್ಪಿದೆ. ಜು.2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ತನ್ನ ಗಂಡನ ಮೇಲೆ ದೂರು ದಾಖಲಿಸಿದ್ದಾರೆ.
ಮೃತ ಮಗು ಜೀವಿತ್ ನ ತಾಯಿ ಚಿತ್ರಾ ತಮ್ಮ ದೂರಿನಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನಾನು ತವರು ಮನೆಗೆ ಹೋಗುತ್ತೇನೆ ಎಂದು ಗಂಡನೊಂದಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗಳವಾಡಿ ನನ್ನನ್ನು ತಳ್ಳಿದ್ದಾರೆ ಈ ವೇಳೆ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿನ ಜ್ವರ ಹೆಚ್ಚಾಯಿತು. ನನ್ನ ಪತಿ ನನ್ನನ್ನು ತಳ್ಳಿದಾಗ ಬಿದ್ದ ಕಾರಣ ನನ್ನ ಮಗುವಿನ ಸಾವಿಗೆ ಕಾರಣವಾಗಿರಬಹುದು ಎಂದು ದೂರಿದ್ದಾರೆ.