ಮುಂಡಾಜೆ ಪ್ರೌಢಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಯ ಪ್ರದರ್ಶನ
ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ )ಪುತ್ತೂರು ಇದರ ಆಡಳಿತಕ್ಕೆ ಒಳಪಟ್ಟ ಪ್ರೌಢಶಾಲೆ ಮುಂಡಾಜೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಡಿ.15 ರಂದು ಏರ್ಪಡಿಸಲಾಯಿತು.
ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯ ಚಂದ್ರ ಶ್ರೀಮಾನ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಮಾತನಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ರಾಜೇಶ್ ರವರು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಇಂತಹ ವಿಜ್ಞಾನಮಾದರಿ ತಯಾರಿಕೆ ಅತ್ಯಂತ ಅಗತ್ಯ ಎಂಬುದನ್ನು ತಿಳಿಸಿದರು.
ಮುಖ್ಯ ಶಿಕ್ಷಕಿಯಾದ ಜಯಂತಿ ಟಿ.ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಮುಂಡಾಜೆ ಪ್ರೌಢಶಾಲೆ, ಮುಂಡಾಜೆ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ, ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮುಂಡಾಜೆ, ಪದವಿ ಪೂರ್ವ ವಿದ್ಯಾಲಯ ಮುಂಡಾಜೆ ಈ ಸಂಸ್ಥೆಗಳ ಸುಮಾರು 1,500 ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಆಡಳಿತ ಮಂಡಳಿಯ ಸಂಚಾಲಕರು ಮತ್ತು ಸದಸ್ಯರು, ಊರಿನ ನಾಗರಿಕರು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.
ವಿಜ್ಞಾನ ಶಿಕ್ಷಕರಾದ ಸುರೇಶ್ ಎಂ ಟಿ ಇವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿಯಾದ ಪಾರ್ವತಿ ಇವರು ಧನ್ಯವಾದಗೈದರು.