• October 22, 2024

ಸ್ವತಂತ್ರ ಭಾರತ ಹಾಗೂ ಅಭಿವೃದ್ಧಿ

 

ಬ್ರಿಟಿಷರ 200 ವರ್ಷಗಳ ಸುದೀರ್ಘ ಆಳ್ವಿಕೆಯಿಂದ ಮುಕ್ತವಾಗಬೇಕೆಂಬ ಹಂಬಲ ಕಾಲ ಕಳೆದಂತೆ ಭಾರತೀಯರಿಗೆ ದೃಢವಾಗುತ್ತಾ ಹೋಯಿತು. ಈ ಹಂಬಲ 1947 ಆಗಸ್ಟ್ 15 ರ ಮಧ್ಯರಾತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ದೊರೆತ ನಂತರ ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು.
ಈ ಸ್ವಾತಂತ್ರ್ಯ ಹೋರಾಟದ ಕದನದಲ್ಲಿ ಅನೇಕ ಹೋರಾಟಗಾರರ ಸಾಕಷ್ಟು ರಕ್ತವು ಈ ಮಣ್ಣಿನಲ್ಲಿ ನೀರಾಗಿ ಹರಿದಿದೆ ಹಾಗೂ ತುಂಬಾ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಈ ಮಣ್ಣಿನ ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡರು.

1857 ರ ಭಾರತದ ಸ್ವಾತಂತ್ರ್ಯ ಸಂಗ್ರಾಮವು ಭಾರತವನ್ನು ಒಗ್ಗೂಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು ಮತ್ತು ದೇಶದ ಹೋರಾಟಗಾರರು ಒಗ್ಗಟ್ಟಿನಿಂದ ಹೋರಾಡಿದರೆ ಸ್ವಾತಂತ್ರ್ಯವನ್ನು ಖಂಡಿತಾ ಗೆಲ್ಲಬಹುದು ಎಂಬ ಅರಿವನ್ನು ಜನರಿಗೆ ತಲುಪಿಸಿತು. ಮೊಂಟೆಗ್ಯೂ ಚೆಲ್ಮ್ಸ್‌ಫೋರ್ಡ್ ಸುಧಾರಣೆ, ರೌಲತ್ ಆಕ್ಟ್, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಸ್ವದೇಶಿ ಚಳುವಳಿ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಭಾರತೀಯ ಜನರ ದಬ್ಬಾಳಿಕೆ ಮತ್ತು ಅದರ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದೆ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ವಿಶೇಷವಾಗಿ ಮೂಲಭೂತ ಸೌಕರ್ಯ, ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅತೀವ ಪ್ರಗತಿ ಸಾಧಿಸಲಾಯಿತು. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣವು ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ಉನ್ನತಿಗೆ ತಂದಿದೆ. ವಿದೇಶಿ ನೇರ ಹೂಡಿಕೆಯು ಅನೇಕ ವಿದೇಶಿ ಬಂಡವಾಳಶಾಹಿಗಳನ್ನು ಆಕರ್ಷಿಸಲು ಕಾರಣವಾಯಿತು. ತನ್ಮೂಲಕ ನಮ್ಮ ರಾಷ್ಟ್ರದ ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸಲು ಕಾರಣವಾಯಿತು. ಮಾಹಿತಿ ತಂತ್ರಜ್ಞಾನವು ನಮ್ಮ ರಾಷ್ಟ್ರಕ್ಕೆ ವರದಾನವಾಗಿ ಪರಿಣಮಿಸಿದೆ. ಇದು ದೇಶದಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ಭೂ ಸುಧಾರಣಾ ಕಾಯ್ದೆ, ರೈತರಿಗೆ ಸಾಲ ಸೌಲಭ್ಯಗಳು, ಹೈಬ್ರಿಡ್ ಬೀಜಗಳ ಪೂರೈಕೆ, ಮಾರುಕಟ್ಟೆ ವ್ಯವಸ್ಥೆ, ಆಧುನಿಕ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳ ಅಳವಡಿಕೆ, ಕೃಷಿ ಅಧ್ಯಯನ ಕೇಂದ್ರಗಳ ಸ್ಥಾಪನೆ ಇತ್ಯಾದಿಗಳು ನಾವು ಕೃಷಿಯಲ್ಲಿ ಪರಿಚಯಿಸಿದ ಕೆಲವು ಅಭಿವೃದ್ಧಿ ಮಂತ್ರವಾಗಿದೆ.

ಹಳ್ಳಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಸುಧಾರಿತ ಔಷಧಗಳು, ಸ್ವಚ್ಚ ಭಾರತ ಅಭಿಯಾನ, ವಿವಿಧ ರೀತಿಯ ಚುಚ್ಚುಮದ್ದುಗಳು, ಆರೋಗ್ಯ ವಿಮೆ ವಿಶೇಷವಾಗಿ ಆಯುಷ್ಮಾನ್ ಭಾರತ್ ಮುಂತಾದವು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ಕಾರಣವಾದ ಮುಖ್ಯ ಅಂಶಗಳಾಗಿವೆ. ಇದರಿಂದಾಗಿ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

2014 ರಲ್ಲಿ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಲಾಯಿತು.
ಸಾರ್ವತ್ರಿಕ ಸಾಕ್ಷರತಾ ಕಾರ್ಯಕ್ರಮಗಳು, ರೇಡಿಯೋ ಆಧಾರಿತ ಶಿಕ್ಷಣ, ಉಚಿತ ಪುಸ್ತಕ ಮತ್ತು ಬ್ಯಾಗ್‌, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ವಿವಿಧ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು ಮಕ್ಕಳಿಗೆ ಪೂರಕವಾಗಿವೆ. 6-14 ನೇ ವಯಸ್ಸಿನವರೆಗೆ ಪ್ರಾಥಮಿಕ ಶಿಕ್ಷಣವು ಈಗ ಮಕ್ಕಳ ಮೂಲಭೂತ ಹಕ್ಕುಗಳಾಗಿ ಮಾರ್ಪಟ್ಟಿದೆ.

ಕಳೆದ 75 ವರ್ಷಗಳಿಂದ ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳು, ದೇಶದ ಎಲ್ಲಾ ಭಾಗಗಳಿಗೆ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣ, ಹಲವಾರು ಕೈಗಾರಿಕೆಗಳ ಸ್ಥಾಪನೆ, ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ, ಸೌರಶಕ್ತಿ ಸ್ಥಾವರಗಳು ಮುಂತಾದ ಮೂಲಸೌಕರ್ಯಗಳು ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಬಾಹ್ಯಾಕಾಶಕ್ಕೆ ಲಗ್ಗೆ, ಉಪಗ್ರಹಗಳ ಉಡಾವಣೆ, 1959 ರಲ್ಲಿ ದೂರದರ್ಶನ ಭಾರತದಲ್ಲಿ ತನ್ನ ಪ್ರಸಾರ ಆರಂಭಿಸಿತು. 1974 ರಲ್ಲಿ ಮೊದಲ ಬಾರಿಗೆ ಪೊಕ್ರಾನ್ ಅಣುಬಾಂಬ್ ಪ್ರಯೋಗ, ನ್ಯಾನೋ ತಂತ್ರಜ್ಞಾನ, ಎಲ್ಲಾ ಕಡೆ ಮೊಬೈಲ್ ಟವರ್‌ಗಳ ಸ್ಥಾಪನೆ, ನಿರಂತರ ಸಂಶೋಧನೆ ವೈಜ್ಞಾನಿಕ ಕ್ಷೇತ್ರದಲ್ಲಿನ ಕ್ಷಿಪ್ರಗತಿಯ ಸಾಧನೆಗಳು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಆದರೂ ನಮಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ದೊಡ್ಡ ಸವಾಲು ನಮ್ಮ ಮುಂದಿದೆ. ಭಾರತದ ಪ್ರಜೆಗಳಾದ ನಾವು ಈ ಪ್ರಶ್ನೆಯನ್ನು ಕೇಳಬೇಕಾಗಿ ಬಂದಿದೆ. ಕೆಲವು ಕಡೆ ನಮ್ಮ ಸ್ವಾತಂತ್ರ್ಯವನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯಲಾಗುತ್ತಿದೆ ಎಂಬುದು ಅತೀ ದುಃಖಕರ ವಿಷಯ. ಇದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ರಾಜಕೀಯ ಶಾಸ್ತ್ರದ ಪಿತಾಮಹ ಅರಿಸ್ಟಾಟಲ್ ಹೇಳಿದಂತೆ, ‘ಮನುಷ್ಯ ಹುಟ್ಟುವಾಗ ಸ್ವತಂತ್ರನಾಗಿ ಹುಟ್ಟುತ್ತಾನೆ, ಆದರೆ ಎಲ್ಲೆಡೆ ಅವನು ಸರಪಳಿಯಿಂದ ಬಂದಿಸಲ್ಪಟ್ಟಿದ್ದಾನೆ.’ ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಧರ್ಮ, ಜಾತಿ, ಪಂಥ, ಪಕ್ಷ ಎಂಬ ಸರಪಳಿಯಲ್ಲಿ ಬಂಧಿಯಾಗಿದ್ದೇವೆ. ಅಂತಿಮವಾಗಿ, ಒಂದು ಪ್ರಶ್ನೆ – ನಮಗೆ ನಿಜವಾದ ಸ್ವಾತಂತ್ರ್ಯ ಸಿಗುವುದು ಯಾವಾಗ?.
ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗಿ ನಿಂತಿದೆ. ಅಂದರೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂಬ ಮಾತು ಸ್ಪಷ್ಟವಾಗಿದೆ. ಬಡವರ ಮತ್ತು ಸಮಾಜದ ಕಟ್ಟಕಡೆಯ ಜನರ ಜೀವನವನ್ನು ಉತ್ತುಂಗಕ್ಕೇರಿಸಲು ಭಾರತದಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ. ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ನಮ್ಮ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸರಿಯಾಗಿ ಬೆಳೆಸಿಕೊಳ್ಳಬೇಕಾಗಿದೆ.

ಬನ್ನಿ, ಆರೋಗ್ಯಕರ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸಿ ಕೆಲಸ ಮಾಡೋಣ.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು.
ಜೈ ಹಿಂದ್.,
ಭಾರತ್ ಮಾತಾ ಕೀ ಜೈ.

ಬರಹ : ಸುನಿಲ್ ಗೊನ್ಸಾಲ್ವಿಸ್, ಮಡಂತ್ಯಾರು.

Related post

Leave a Reply

Your email address will not be published. Required fields are marked *

error: Content is protected !!