ಉಜಿರೆ:ಸನಾತನ ಸಂಸ್ಥೆ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮ
ಉಜಿರೆ: ಸನಾತನ ಸಂಸ್ಥೆಯ ವತಿಯಿಂದ ಜು.13 ರಂದು ಸೀತಾರಾಮ ಕಲಾಮಂದಿರ ಹಳೇಪೇಟೆ ಉಜಿರೆ ಇಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಶ್ರೀ ವ್ಯಾಸಪೂಜೆ ಮತ್ತು ಪ.ಪೂ ಭಕ್ತರಾಜ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಮಾಡುವ ಮುಖೇನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಜಿರೆಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ನೊಚ್ಚ ಮಾತನಾಡಿ ಗುರುಗಳು ಹೇಳಿದ್ದನ್ನು ಜೀವನದಲ್ಲಿ ಅನುಸರಿಸುವುದೇ ನಿಜವಾದ ಗುರುದಕ್ಷಿಣೆಯಾಗಿದೆ. ಸನಾತನ ಸಂಸ್ಥೆಯು ಹೇಳಿಕೊಡುವ ಧರ್ಮಶಿಕ್ಷಣದ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ಧರ್ಮ ಪ್ರೇಮವು ನಿರ್ಮಾಣವಾಗುತ್ತದೆ ಎಂದು ಹೇಳಿದರು.
ನಂತರ ಲಕ್ಷ್ಮೀ ಪೈ ಇವರು ಮಾತನಾಡಿ ಸಮಾಜ ಮತ್ತು ರಾಷ್ಟ್ರವನ್ನು ಸುಗಮವಾಗಿ ನಡೆಸಬೇಕಾದರೆ ಧರ್ಮದ ಅಧಿಷ್ಠಾನವು ಎಲ್ಲಾ ಕ್ಷೇತ್ರಗಳಲ್ಲಿ ಇರುವುದು ಅವಶ್ಯಕವಾಗಿದೆ. ವೈಯಕ್ತಿಕ ಅಥವಾ ಸಾಮಾಜಿಕ ಜೀವನದಲ್ಲಿ ಧರ್ಮದ ಅಧಿಷ್ಠಾನ ಬಂದರೆ, ವ್ಯಕ್ತಿಯು ನೀತಿವಮತನಾಗುತ್ತಾನೆ ಮತ್ತು ತಪ್ಪು ಕೃತಿಗಳನ್ನು ಮಾಡುವುದನ್ನು ತಡೆಗಟ್ಟುತ್ತಾನೆ. ಆದುದರಿಂದ ಧರ್ಮದ ಅಧೀಷ್ಠಾನವಿದ್ದರೆ ಮಾತ್ರ ಧರ್ಮನಿಷ್ಠ ಅಂದರೆ ಆದರ್ಶವಾದ ಸಮಾಜದ ನಿರ್ಮಿತಿಯಾಗಬಹುದು. ರಾಷ್ಟ್ರಕ್ಕೆ ನಿಜವಾದ ಅರ್ಥದಲ್ಲಿ ಉರ್ಜಿತಾವಸ್ಥೆ ಪ್ರಾಪ್ತ ಮಾಡಿಕೊಳ್ಳಬೇಕಿದ್ದರೆ ಪ್ರತಿಯೊಬ್ಬರು ಧರ್ಮಶಿಕ್ಷಣವನ್ನು ಪಡೆದು, ಧರ್ಮಾಚರಣೆಯನ್ನು ಮಾಡಿ ಧರ್ಮನಿಷ್ಠ ಸಮಾಜದ ನಿರ್ಮಿತಿ ಮತ್ತಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕೃತಿಶೀಲರಾಗಬೇಕು ಎಂದು ತಿಳಿಸಿದರು.
ಈ ವೇಳೆ ಸ್ವಸಂರಕ್ಷಣ ಪ್ರಾತ್ಯಕ್ಷಿಕೆಯ ಕಿರುಚಿತ್ರವನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ 220 ಜಿಜ್ಞಾಸುಗಳು ಉಪಸ್ಥಿತರಿದ್ದರು.