ಖುತುಸ್ರಾವಕ್ಕೆ ಸಂಬಂಧಿಸಿದ ಹೊಟ್ಟೆನೋವು ಎಂದುಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿಗೆ ಕಾದಿತ್ತು ಆಘಾತ!!!
ಲಂಡನ್: ಋತುಸ್ರಾವಕ್ಕೆ ಸಂಬಂಧಿಸಿದ ಹೊಟ್ಟೆನೋವು ಎಂದು ಶೌಚಾಲಯಕ್ಕೆ ತೆರಳಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು, ಅಲ್ಲಿಯೇ ಮಗುವಿಗೆ ಜನ್ಮನೀಡಿದ ಘಟನೆ ಬ್ರಿಟನ್ನಲ್ಲಿ ನಡೆದಿದೆ. ತಾನು ಗರ್ಭಿಣಿಯಾಗಿರುವುದೇ ಗೊತ್ತಿಲ್ಲದ 20 ವರ್ಷದ ವಿದ್ಯಾರ್ಥಿನಿ, ಋತುಸ್ರಾವದ ಕಾರಣದಿಂದ ತನಗೆ ಹೊಟ್ಟೆ ನೀವು ಬಂದಿದೆ ಎಂದು ಭಾವಿಸಿ ಶೌಚಾಲಯಕ್ಕೆ ತೆರಳಿದ್ದಳು. ಆದರೆ, ಅಲ್ಲಿ ಮಗು ಜನಿಸಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾಳೆ.
ಬ್ರಿಸ್ಟಲ್ನಲ್ಲಿ ಇತಿಹಾಸ ಮತ್ತು ರಾಜಕೀಯ ವಿದ್ಯಾರ್ಥಿನಿಯಾಗಿರುವ ಜೆಸ್ ಡೇವಿಸ್, ಸೌಥಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷ ಪದವಿ ಓದುತ್ತಿದ್ದಾಳೆ. ಆಕೆಯಲ್ಲಿ ಗರ್ಭಧಾರಣೆಯ ಯಾವುದೇ ಲಕ್ಷಣ ಇರಲಿಲ್ಲ. ಅಲ್ಲದೆ, ಹೊಟ್ಟೆಯ ಗಾತ್ರ ಕೂಡ ದೊಡ್ಡದಾಗಿರಲಿಲ್ಲ. ತನ್ನ ಋತುಚಕ್ರ ಈ ಹಿಂದಿನಿಂದಲೂ ಸರಿಯಾಗಿ ಇರಲಿಲ್ಲ. ಹೀಗಾಗಿ ಕೆಲವು ತಿಂಗಳಿನಿಂದ ಮುಟ್ಟಾಗಿಲ್ಲ ಎನ್ನುವುದು ತನ್ನ ಗಮನಕ್ಕೇ ಬಂದಿರಲಿಲ್ಲ ಎಂದು ತಿಳಿಸಿದ್ದಾಳೆ.
ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಆಕೆ, ಈಗ ತಾಯ್ತುನದ ಆರೈಕೆಯಲ್ಲಿದ್ದಾಳೆ. 3 ಕೆಜಿ ತೂಕವಿರುವ ಮಗು, ಆರೋಗ್ಯವಾಗಿದೆಯಂತೆ. “ಆತ ಹುಟ್ಟಿದಾಗ ನನ್ನ ಜೀವನದ ಅತ್ಯಂತ ದೊಡ್ಡ ಆಘಾತ ಉಂಟಾಗಿತ್ತು. ನಾನು ಕನಸು ಕಾಣುತ್ತಿದ್ದೇನೆಯೇ ಎಂದು ಮೊದಲು ಅನಿಸಿತ್ತು. ಆದರೆ ಈಗಂತೂ ಚಂದ್ರನೇ ಕೈಗೆ ಸಿಕ್ಕಷ್ಟು ಖುಷಿಯಾಗಿದೆ” ಎಂದು ಜೆಸ್ ಡೇವಿಸ್ ಹೇಳಿದ್ದಾಳೆ.
ಬೆಳಿಗ್ಗೆ ಎದ್ದಾಗ ವಿಪರೀತ ಹೊಟ್ಟೆ ನೋವು ಉಂಟಾಗುತ್ತಿತ್ತು. ಸಾಮಾನ್ಯವಾಗಿ ಮುಟ್ಟಿನ ದಿನ ಆರಂಭವಾದಾಗ ಈ ರೀತಿ ನೋವು ಕಾಣಿಸಿಕೊಳ್ಳುತ್ತಿದ್ದರಿಂದ, ಅದರದ್ದೇ ನೋವು ಇರಬೇಕು ಎಂದು ಭಾವಿಸಿದ್ದಳು. ಎದ್ದು ನಿಲ್ಲಲೂ ಕಷ್ಟವಾಗುತ್ತಿತ್ತು. ಹಾಸಿಗೆ ಮೇಲೆ ಮಲಗಲು ಕೂಡ ಸಾಧ್ಯವಾಗುತ್ತಿರಲಿಲ್ಲ. “ಮರುದಿನ ನನ್ನ ಹುಟ್ಟು ಹಬ್ಬ ಇತ್ತು. ಅದಕ್ಕಾಗಿ ಆ ರಾತ್ರಿ ಮನೆಯಲ್ಲಿ ಪಾರ್ಟಿ ಆಯೋಜಿಸಬೇಕಿತ್ತು. ಹೀಗಾಗಿ ಸ್ನಾನ ಮಾಡಿದರೆ ಕೊಂಚ ಆರಾಮ ಆಗುತ್ತದೆ ಎಂದು ಸ್ನಾನ ಮಾಡಿದ್ದೆ. ಆದರೆ, ನೋವು ಸಮಯ ಕಳೆದಂತೆ ಮತ್ತಷ್ಟು ಹೆಚ್ಚುತ್ತಲೇ ಇತ್ತು” ಎಂದು ತಿಳಿಸಿದ್ದಾಳೆ.
ನೋವಿನ ನಡುವೆ, ಇದ್ದಕ್ಕಿದ್ದಂತೆ ಶೌಚಾಲಯಕ್ಕೆ ಹೋಗಬೇಕು ಎನಿಸಿತ್ತು. ಅಲ್ಲಿ ಕುಳಿತು, ಒತ್ತಡ ಹೇರತೊಡಗಿದ್ದೆ. ಯಾವ ಸಮಯಕ್ಕೂ ನಾನು ಮಗುವಿಗೆ ಜನ್ಮ ನೀಡುತ್ತಿದ್ದೇನೆ ಎನ್ನುವುದು ಕಿಂಚಿತ್ತೂ ಅನಿಸಿರಲಿಲ್ಲ. ಆದರೆ ಒಂದು ಹಂತದಲ್ಲಿ ವಿಪರೀತ ಭಯವಾಗತೊಡಗಿತ್ತು. ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಾಗಿರಲಿಲ್ಲ ಎಂದಿದ್ದಾಳೆ.
ಹೊಟ್ಟೆಯಿಂದ ಏನನ್ನೋ ಹರಹಾಕಬೇಕು ಎಂದಷ್ಟೇ ಅನಿಸಿತ್ತು. ಅವನ ಅಳು ಕೇಳಿದ ಬಳಿಕ ನನಗೆ ಅರ್ಥವಾಗತೊಡಗಿತ್ತು. ಅಲ್ಲಿಯವರೆಗೂ ವಾಸ್ತವವಾಗಿ ನಡೆದಿರುವುದು ಅಸಂಭಾವ್ಯವಾಗಿತ್ತು ಎಂದು ತನ್ನ ಸನ್ನಿವೇಶವನ್ನು ವಿವರಿಸಿದ್ದಾಳೆ.
ಮನೆಯಲ್ಲಿ ಒಬ್ಬಳೇ ಇದ್ದ ಜೆಸ್, ತನ್ನ ಆಪ್ತ ಸ್ನೇಹಿತೆ ಲಿವ್ ಕಿಂಗ್ಗೆ ಕರೆ ಮಾಡಿದ್ದಾಳೆ. ಮರುದಿನದ ಪಾರ್ಟಿಗೆ ಗೈರಾಗಲು ಏನೋ ಕಟ್ಟುಕಥೆ ಹೇಳುತ್ತಿದ್ದಾಳೆ ಎಂದು ಆಕೆ ಭಾವಿಸಿದ್ದಳು. ಕೊನೆಗೆ ಆಕೆ ನವಜಾತ ಶಿಶುವಿನ ಫೋಟೊ ಕಳುಹಿಸಿದಾಗ, ಆಂಬುಲೆನ್ಸ್ಗೆ ಕರೆ ಮಾಡುವಂತೆ ಕಿಂಗ್ ಸಲಹೆ ನೀಡಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಮಗುವನ್ನು ಇನ್ಕ್ಯೂಬೇಟರ್ನಲ್ಲಿ ಇರಿಸಿದ್ದಾರೆ. 35 ವಾರಗಳಲ್ಲಿ ಮಗು ಜನಿಸಿದೆ ಎಂದು ವೈದ್ಯರು ಊಹಿಸಿದ್ದಾರೆ.