ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆದ ಲಯನ್ಸ್ ಸುವರ್ಣ ಸಂಭ್ರಮ ಕಾರ್ಯಕ್ರಮ
ಬೆಳ್ತಂಗಡಿ; ಉಜಿರೆಯಲ್ಲಿ ಕೈಗಾರಿಕಾ ಪ್ರದೇಶವೊಂದನ್ನು ಮಾಡುವ ಉದ್ದೇಶದಿಂದ 108 ಎಕ್ರೆ ಜಮೀನನ್ನು ಗುರುತಿಸಲಾಗಿತ್ತಾದರೂ ಸರಕಾರದ ಬದಲಾವಣೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. ಒಂದು ವೇಳೆ ಇದು ಸಾಧ್ಯವಾದರೆ ತಾಲೂಕಿನ 2 ಸಾವಿರಕ್ಕೂ ಮಿಕ್ಕಿದ ಜನರಿಗೆ ಉದ್ಯೋಗ ಸೃಷ್ಟಿಯಾಗಿ ಅಭಿವೃದ್ಧಿ ಪೂರಕವಾಗುತ್ತದೆ. ಲಯನ್ಸ್ ಸಂಸ್ಥೆಯಲ್ಲಿರುವ ಉದ್ಯಮಿಗಳು ತಮ್ಮ ಉದ್ಯಮವನ್ನು ಆರಂಭಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ತಮ್ಮ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಅಭಿಪ್ರಾಯ ವ್ಯಕ್ತಪಡಿಸಿದರು.
ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಜೂ. 23 ರಂದು ನಡೆದ ಲಯನ್ಸ್ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು, ಸ್ಮರಣ ಸಂಚಿಜೆಯ ಮುಖಪುಟ ಅನಾವರಗೊಳಿಸಿ, ಎಲ್ಲಾ ಸದಸ್ಯರನ್ನು ಗೌರವಿಸಿ ಮಾತನಾಡುತ್ತಿದ್ದರು.
ಮೂಲಭೂತ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿಗೆ ಲಯನ್ಸ್ ನಂತಹಾ ಸಂಸ್ಥೆಗಳ ಆವಶ್ಯಕತೆ ಇದೆ. ಸಮಾಜದಿಂದ ಪಡೆದಿದ್ದನ್ನು ಮತ್ತೆ ಸಮಾಜಕ್ಕೆ ಅರ್ಪಿಸುವ ಕೊಂಡಿಯಾಗಿ ಲಯನ್ಸ್ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ಮೂಲಕ ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮಾತನಾಡಿ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಜೀವಿಸುವವರು ಜೀವನದ ಕೊನೆಗೆ ಸಾರ್ಥಕತೆ ಅನುಭವಿಸುತ್ತಾರೆ. ಸಂಘ ಜೀವಿಸುವ ಮನುಷ್ಯರು ಹತ್ತಾರುಜನ ಸೇರಿ ಸಂಸ್ಥೆ ಕಟ್ಟುತ್ತಾರೆ. ಆದರೆ ಅದನ್ನು50 ವರ್ಷ ಮುನ್ನಡೆಸಿಕೊಂಡು ಹೋಗಿರುವುದೇ ದೊಡ್ಡ ಸಾಹಸದ ಕೆಲಸ. ಸಾಕಷ್ಟು ಸಂಪಾದಿಸಿ ಮತ್ತೆ ಸಮಾಜ ಸೇವೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಜೀವನದ ಎಲ್ಲ ಏರುಪೇರುಗಳ ಮಧ್ಯೆ ಇತರರ ಸೇವೆ ಮಾಡುವುದೇ ನಿಜವಾದ ಸೇವೆ ಎಂದರು.
ಲಯನ್ಸ್ ಜಿಲ್ಲಾ ರಾಜ್ಯಪಾಲ
ಡಾ. ಮೆಲ್ವಿನ್ ಡಿಸೋಜಾ ಮಾತನಾಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಜಿಲ್ಲೆಯ ಸೀನಿಯರ್ ಕ್ಲಬ್ ಹಾಗೂ ಎಲ್ಲರಿಗೂ ಅಚ್ಚು ಮೆಚ್ಚಿನ ಕ್ಲಬ್. ಈವರ್ಷದ ಅಧ್ಯಕ್ಷರು ಈ ಜಿಲ್ಲೆಯಲ್ಲಿ ಸಂಸ್ಥೆಯ ಹೆಸರನ್ನು ಅತೀ ಎತ್ತರಕ್ಕೆ ಕೊಂಡೋಗಿದ್ದಾರೆ.
‘ಬಿ ಕೈಂಡ್ ಮತ್ತು ಸ್ಮೈಲ್’ ನಮ್ಮ ಧ್ಯೇಯದಂತೆ
ಕರುಣಾಮಯಿಯಾಗಿರುವುದು ಮತ್ತು ಮತ್ತು ಎಲ್ಲರ ಮುಖದಲ್ಲೂ ನಗು ತರುವ ಕೆಲಸ ಬೆಳ್ತಂಗಡಿ ಕ್ಲಬ್ಬಿನಿಂದ ಆಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ವಹಿಸಿದ್ದು, ಹಿರಿಯರ ಸಮಾಜ ಸೇವೆ ನೋಡಿ ನಾವು ಸೇವೆ ಕಲಿತಿದ್ದೇವೆ. ರಾಜ್ಯಪಾಲರ ಧ್ಯೇಯದಂತೆ ಎಲ್ಲಾ ಸದಸ್ಯರುಗಳ ಪದರೋತ್ಸಾಹದಿಂದ 500 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ತಪ್ಪಿದ್ದರೆ ಅದು ನನ್ನದು, ಯಶಸ್ಸಾಹಿದ್ದರೆ ಅದು ಸಮಸ್ತ ಲಯನ್ಸ್ ಬಂಧುಗಳದ್ದು ಎಂದರು.
ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ಜಿಲ್ಲಾ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜಾ, ಕೋಶಾಧಿಕಾರಿ ಸುಧಾಕರ ಶೆಟ್ಟಿ, ತಾಲೂಕು ಕೋಶಾಧಿಕಾರಿ ಶುಭಾಷಿಣಿ, ನಿಕಟಪೂರ್ವ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ, ನಿಯೋಜಿತ ಅಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ, ಸವಿಯಾ ಯು ಶೆಟ್ಟಿ, ಲಿಯೋ ಕ್ಲಬ್ ಅಧ್ಯಕ್ಷೆ ಅಪ್ಸರಾ ಗೌಡ ಉಪಸ್ಥಿತರಿದ್ದರು.
ಲಯನ್ಸ್ ಸ್ಥಾಪಕ ಸದಸ್ಯರಾದ ಎಂ.ಜಿ ಶೆಟ್ಟಿ ಮತ್ತು ವಿ.ಆರ್ ನಾಯಕ್ ಅವರನ್ನು ಗೌರವಿಸಲಾಯಿತು. ಬಳಿಕ ಎಂ.ಜಿ ಶೆಟ್ಟಿ ಅವರು ಸುವರ್ಣ ವರ್ಷ ಸ್ಮರಣೆ ನಡೆಸಿದರು. 50 ವರ್ಷಗಳಲ್ಲಿ ಚುಕ್ಕಾಣಿ ಹಿಡಿದಿದ್ದವರನ್ನು ಅಭಿನಂದಿಸಲಾಯಿತು. ನಾಲ್ವರು ಅಗ್ರ ಸಾಧಕರಾದ ಲಕ್ಷ್ಮೀ ಗ್ರೂಪ್ಸ್‌ನ ಮಾಲಕ ಮೋಹನ್ ಕುಮಾರ್ ಉಜಿರೆ, ಡಾ. ಕಾಂಚೋಡು ಗೋಪಾಲಕೃಷ್ಣ ಭಟ್, ಡಾ.ಕೆ.ಜಿ ಪಣಿಕ್ಕರ್ ಮತ್ತು ಗಣೇಶ್ ಬಿ.ಎಲ್ ಅವರನ್ನು ಸನ್ಮಾನಿಸಲಾಯಿತು.
ಸುವರ್ಣ ಮಹೋತ್ಸವ ಅಂಗವಾಗಿ ಲಯನ್ಸ್ ಅಧ್ಯಕ್ಷ ಉಮೇಶ್ ಶೆಟ್ಟಿ ಮತ್ತು ಸವಿತಾ ದಂಪತಿಯನ್ನು ಸನ್ಮಾನಿಸಲಾಯಿತು.
ವಸಂತ ಶೆಟ್ಟಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಧರಣೇಂದ್ರ ಕೆ ಜೈನ್, ದತ್ತಾತ್ರೇಯ ಗೊಲ್ಲ, ಪಾಲಾಕ್ಷ ಸುವರ್ಣ, ಸುರೇಶ್ ಶೆಟ್ಟಿ ಲಾಯಿಲ, ಅಮಿತಾನಂದ ಹೆಗ್ಡೆ ಇವರು ವೇದಿಕೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಕಟ್ಟಡ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಸುವರ್ಣ ಮಹೋತ್ಸವ ಅವಲೋಕನ ನಡೆಸಿದರು.
ಪ್ರಕಾಶ ಶೆಟ್ಟಿ ನೊಚ್ಚ ನಿರೂಪಿಸಿದರು. ಭಾಷಿಣಿ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಅನಂತಕೃಷ್ಣ ವಂದಿಸಿದರು.
ಸಭೆಯ ಆರಂಭದಲ್ಲಿ ಉಜಿರೆ ರತ್ನವರ್ಮ ಕ್ರೀಡಾಂಗಣದಿಂದ ಮೆರವಣಿಗೆ ನಡೆಯಿತು. ದಕ್ಷ ಮೆಲೋಡಿಸ್ ವತಿಯಿಂದ ಸಂಗೀತ ರಸಮಂಜರಿ, ಲಿಯೋ ಕ್ಲಬ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಭೆಯ ಕೊನೆಗೆ ದೇವದಾಸ್ ಕಾಪಿಕಾಡ್ ಅವರ ತಂಡದಿಂದ “ಪುದರ್ ದೀದಾಂಡ್ ” ತುಳು ನಾಟಕ ಪ್ರದರ್ಶನ ನಡೆಯಿತು.