ಬಂಟ್ವಾಳ: ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಮಳೆಯಿಂದ ರಸ್ತೆಯೆಲ್ಲಾ ಕೆಸರು ಮಯ ಸಂಚಾರ ಅಸ್ತವ್ಯಸ್ತ:ಸಾರ್ವಜನಿಕರಿಂದ ದೂರು:ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ
ಬಂಟ್ವಾಳ: ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇದೀಗ ಮಳೆಯಿಂದ ರಸ್ತೆಯೆಲ್ಲಾ ಕೆಸರು ಮಯವಾಗಿ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆಯ ಅವಸ್ಥೆಯನ್ನು ಕಂಡ ಜಿಲ್ಲಾಧಿಕಾರಿ ಅವರು ರಸ್ತೆ ನಿರ್ಮಾಣದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಮತ್ತು ಇಲಾಖೆಯ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ವರ್ತಕರನ್ನು ಕರೆಸಿ ರಸ್ತೆ ಕಾಮಗಾರಿಯಿಂದ ಅವರಿಗೆ ಉಂಟಾದ ಸಮಸ್ಯೆಗಳ ಬಗ್ಗೆ ಆಲಿಸಿ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಸ್ತುತ ರಸ್ತೆ ಕಾಮಗಾರಿಗೆ ಅಗೆತ ನಡೆಸಿದ್ದು,ನೀರು ಹರಿಯುವ ಸ್ಥಳ ಎತ್ತರ ಪ್ರದೇಶದಲ್ಲಿದ್ದು,ಇದರಿಂದ ಅಂಗಡಿಮುಂಗಟ್ಟುಗಳ ಬಾಗಿಲಿಗೆ, ನೀರು ನಿಲ್ಲುವಂತಾಗಿದೆ.ಇದನ್ನು ಸರಿಪಡಿಸಿಕೊಡುವಂತೆ ವರ್ತಕರು ಮನವಿ ಸಲ್ಲಿಸಿದರು.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ರೂಪುರೇಷೆಗಳನ್ನು ಪರಿಶೀಲಿಸಿ ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಿ ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಪ್ರಸ್ತುತ ಮಳೆಯಿಂದಾಗಿ ರಸ್ತೆ ಕೆಸರು ಮಯವಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಇಲಾಖೆಯ ಅಧಿಕಾರಿಗಳು, ಬೆಳ್ತಂಗಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.