ಬೆಳಾಲು ಪ್ರೌಢ ಶಾಲೆಯಲ್ಲಿ ಸಾಹಿತ್ಯ ಪೇರಣೆ ಕಾರ್ಯಕ್ರಮ
ಬೆಳಾಲು : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ
ವತಿಯಿಂದ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದವರ ಸಹಭಾಗಿತ್ವದೊಂದಿಗೆ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಶಾಲಾ ಮಕ್ಕಳಿಗೆ ಸಾಹಿತ್ಯ ಪ್ರೇರಣಾ ಕಾರ್ಯಕ್ರಮ ಏ.4 ರಂದು ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪತ್ರಕರ್ತ, ಕಸಾಪ ತಾಲೂಕು ಪದಾಧಿಕಾರಿ ಅಶ್ರಫ್ ಆಲಿಕುಂಞಿ ಮುಂಡಾಜೆಯವರು ಮಾತನಾಡುತ್ತಾ, ಬರವಣಿಗೆ ಒಂದು ಕಲೆ. ಕಲೆಯನ್ನು ವ್ಯವಸಾಯವಾಗಿಯೂ ಹವ್ಯಾಸವಾಗಿಯೂ ಬೆಳೆಸಿಕೊಳ್ಳಲು ಅವಕಾಶವಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಕಥೆ ಕವನ ಮುಂತಾದ ಬರೆಯುವ ಅಭಿರುಚಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ವಿದ್ಯಾರ್ಥಿಗಳನ್ನು ಬದುಕಿಗೆ ಸಿದ್ಧಗೊಳಿಸುತ್ತದೆ. ನಮ್ಮೊಳಗಿನ ಸಾಧಕರನ್ನು ಪರಿಚಯಿಸುವುದು, ನಮ್ಮ ಸುತ್ತಲಿನ ಸಮಸ್ಯೆಗಳನ್ನೇ ಬರೆಯುವ ಮತ್ತು ಹೇಳಿಕೊಳ್ಳುವ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳುವ ಅವಕಾಶ ಉಪಯೋಗಿಸಿಕೊಳ್ಳಬೇಕು. ನಿರಂತರ ಓದುವ ಪ್ರವೃತ್ತಿಯ ಮೂಲಕ ಶಬ್ಧಭಂಡಾರ ಹೆಚ್ಚಿಸಿಕೊಂಡು ಪ್ರಬುದ್ಧ ಸಾಧನೆ ದಾಖಲಿಸಬಹುದು ಎಂದರು. ಜೊತೆಗೆ ವಿದ್ಯಾರ್ಥಿಗಳಿಗೆ ಕಥೆ, ಕವನ ಬರವಣಿಗೆಯ ಬಗ್ಗೆ ಪ್ರಾಯೋಗಿಕ ತರಬೇತಿಯನ್ನೂ, ಚಿತ್ರ ಬರಹ ಪ್ರಯೋಗವನ್ನೂ ನಡೆಸಿದರು.
ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ವಹಿಸಿದ್ದರು.
ವೇದಿಕೆಯಲ್ಲಿ ಶಿಬಿರದ ಸಂಯೋಜಕ ಕೃಷ್ಣಾನಂದ ರಾವ್ ಮುಂಡಾಜೆ ಮತ್ತು ಶಿಕ್ಷಕ, ಸಿಬ್ಬಂದಿಯವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಜೀವನ್ ಕುಮಾರ್ ಶಿಬಿರದ ವರದಿ ಮಂಡನೆ ಮಾಡಿದರೆ ಕು. ಲಿಖಿತಾ ದಿನದ ಚಿಂತನೆಯನ್ನು ನಡೆಸಿದರು. ಶ್ರವಣ್ ಕುಮಾರ್ ಸ್ವಾಗತಿಸಿ, ವಿನ್ಯಾಸ್ ಧನ್ಯವಾದ ಸಲ್ಲಿಸಿದರು. ಚಿಂತನ್ ಕಾರ್ಯಕ್ರಮ ನಿರೂಪಿಸಿದರು.