ಬೆಳ್ತಂಗಡಿಯನ್ನು ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ತರುವಲ್ಲಿ ನಿರಂತರ ಜನರ ಧ್ವನಿಯಾಗಿ ಹೋರಾಟ ಮಾಡುತ್ತೇವೆ: ಕರ್ನಾಟಕ ರಾಜ್ಯ ರೈತ ಸಂಘದಿಂದ ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಕರ್ನಾಟಕದ ಗ್ರಾಮೀಣ ಚಳುವಳಿಗಳಾದ ರೈತ ಚಳುವಳಿ ಹಾಗೂ ದಲಿತ ಚಳುವಳಿಗಳು ಒಟ್ಟಾಗಿ ತಮ್ಮ ರಾಜಕೀಯ ವೇದಿಕೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಮೂಲಕ ಚುನಾವಣಾ ಕಣಕ್ಕೆ ಧುಮುಕಿದ್ದು, ಸರ್ವೋದಯ ಕರ್ನಾಟಕ ಪಕ್ಷದಿಂದ ಮೊದಲ ಪಟ್ಟಿಯಲ್ಲಿ 5 ಅಭ್ಯರ್ಥಿಗಳನ್ನು ವಿಧಾನ ಸಭಾ ಚುನಾವಣೆಗೆ ಘೋಷಣೆ ಮಾಡಿ ಅದರಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಜಿಲ್ಲಾ ಯುವ ರೈತ ಘಟಕದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಸಂಚಾಲಕರಾದ ಆದಿತ್ಯ ನಾರಾಯಣ ಕೊಲ್ಲಾಜೆ ಇವರನ್ನು ಅಭ್ಯರ್ಥಿಯಾಗಿಸಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯಾಡಳಿತ ಕ್ಷೇತ್ರಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದರು.
ಮಾರ್ಚ್ 24 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಚುನಾವಣಾ ರಾಜಕಾರಣವು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ತದ್ವಿರುದ್ಧವಾಗಿ ನಡೆಯುತ್ತಿದ್ದು, ಸೇವಾಕ್ಷೇತ್ರವಾಗಿದ್ದ ಪ್ರಾಮಾಣಿಕ ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯನ್ನು ಮರು ಹುಟ್ಟುಹಾಕುವ ಪ್ರಮುಖ ಜವಬ್ದಾರಿ ಚಳುವಳಿಗಳೇ ನಿರ್ವಹಿಸಬೇಕಾಗಿದೆ. ದೇಶದ ಸಂಪತ್ತನ್ನು ಸಂರಕ್ಷಿಸುವ ಹಾಗೂ ದೇಶದ ನಾಗರೀಕರಿಗೆ ಸಮಾನವಾಗಿ ಹಂಚಿಕೆ ಮಾಡಬೇಕಾದ ಪ್ರಭುತ್ವ ಸಂಪತ್ತಿನ ಬಹುಪಾಲನ್ನು ಬಂಡವಾಳ ಶಾಹಿ ಅಂತರಾಷ್ಟ್ರೀಯ ಕಂಪೆನಿಗಳಿಗೆ ವರ್ಗಾವಣೆ ಮಾಡುತ್ತಿದೆ. ಇದನ್ನು ತಡೆದು ದೇಶೀಯ ಸಂಪತ್ತನ್ನು ಸದ್ಬಳಕೆಯ ನಡೆ ಹೆಜ್ಜೆ ಇಡಬೇಕಾಗಿದೆ ಎಂದು ಅವರು ತಿಳಿಸಿದರು.
ನನ್ನ ಮೇಲೆ ಆರೋಪ ಹೊರಿಸುವ ಪ್ರೇರಣೆಯೊಂದಿಗೆ ಸಾಕಷ್ಟು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಪ್ರಸ್ತುತ ರಾಜಕೀಯ ಪಕ್ಷವು ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಬೆಳ್ತಂಗಡಿ ಯನ್ನು ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ತರುವಲ್ಲಿ ನಿರಂತರ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾ ಯುವ ರೈತ ಘಟಕದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಸಂಚಾಲಕರಾದ ಆದಿತ್ಯ ನಾರಾಯಣ ಕೊಲ್ಲಾಜೆ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಭಾ ಸದಸ್ಯರು ಸನ್ನಿ ಡಿಸೋಜ ನೀರುಮಾರ್ಗ, ಜಿಲ್ಲಾಧ್ಯಕ್ಷರು ಓಸ್ವಲ್ಡ್ ಪ್ರಕಾಶ್ ಫೆರ್ನಾಂಡೀಸ್, ಆದಿತ್ಯ ಕೊಲ್ಲಾಜೆ ಯುವರೈತ ಘಟಕ ಜಿಲ್ಲಾಧ್ಯಕ್ಷ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕದ ಅಭ್ಯರ್ಥಿ ಮತ್ತು ರಾಮಣ್ ವಿಟ್ಲ ಜಿಲ್ಲಾ ಕಾರ್ಮಿಕ ಮುಖಂಡ ಇವರು ಉಪಸ್ಥಿತರಿದ್ದರು.