ಬೆಳ್ತಂಗಡಿ: ಮಳೆ ಹಾನಿಗೊಳಗಾದ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ, ನೆರಿಯ ಪುದುವೆಟ್ಟು, ಕಳೆಂಜ, ಅರಸಿನಮಕ್ಕಿ, ಶಿಬಾಜೆ, ಶಿಶಿಲ, ರೆಖ್ಯಾ ಈ ಭಾಗದ ಮನೆಗಳಿಗೆ ಜು.23 ರಂದು ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕರು ಮಳೆಯಿಂದಾಗಿ ಪ್ರಕೃತಿ ವಿಕೋಪದಡಿಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದ್ದು ಇಂತಹ ಮನೆಗಳಿಗೆ ಸರಕಾರ ಘೋಷಣೆ ಮಾಡಿದಂತಹ ರೀತಿಯಲ್ಲಿ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿದ್ದೇನೆ. ಅದರ ಜೊತೆಗೆ ವೈಯಕ್ತಿಕವಾಗಿ ತಕ್ಷಣ ಆರ್ಥಿಕ ಸಹಾಯವನ್ನು ಮಾಡಿದ್ದೇನೆ. ಸ್ಥಳೀಯ ಎಲ್ಲಾ ಗ್ರಾ.ಪಂ ನ ಅಧ್ಯಕ್ಷರು, ಸದಸ್ಯರುಗಳು ಎಲ್ಲರೂ ಸೇರಿಕೊಂಡು ಆಯಾಯ ಕಾಲಘಟ್ಟಕ್ಕೆ ಮನೆಗಳಿಗೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. ಬೇರೆ ಬೇರೆ ಭಾಗಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಯ ಬಗ್ಗೆಯೂ ಗಮನಕ್ಕೆ ಬಂದಿದ್ದು, ಮಲವಂತಿಗೆ , ದಿಡುಪೆ ಮತ್ತು ಮಿತ್ತಬಾಗಿಲನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಕೊಲ್ಲಿಯಿಂದ ಪಣೆಕ್ಕಲ್ ಮೂಲಕ ದಿಡುಪೆಯಿಂದ ಸಾಗುವ ರಸ್ತೆಗೆ ಕಾಂಕ್ರೀಟಿಕರಣ ಆಗಬೇಕು ಎನ್ನುವ ಬಹಳ ವರ್ಷದ ಬೇಡಿಕೆಗೆ ಈಗಾಗಲೇ ಕೊಲ್ಲಿಯಿಂದ ಲಾಯಿಲಕ್ಕೆ ಹೋಗುವ ಪಿಡ್ಬ್ಯುಡಿ ರಸ್ತೆಗೆ 9 ಕೋಟಿ ರೂ ಅನುದಾನವನ್ನು ಲೋಕೋಪಯೋಗಿ ಸಚಿವರು ಅನುದಾನವನ್ನು ಒದಗಿಸಿದ್ದಾರೆ ಮುಂದಿನ ದಿನಗಳಲ್ಲಿ ಟ್ರೆಂಡರ್ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಿದರು.
ಗುಡ್ಡ ಕುಸಿದು ಮನೆಗೆ ಅಪಾರ ಹಾನಿಗೊಳಗಾದ ಮಲವಂತಿಗೆ ಗ್ರಾಮದ ಪರಾರಿ ಗುಡ್ಡೆ ಸುಂದರ ಪೂಜಾರಿಯವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅವರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಕಿಲ್ಲೂರು ಹಿ.ಪ್ರಾ ಶಾಲೆಯ ಹಳೆ ಕಟ್ಟಡವನ್ನು ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರದ ಬಗ್ಗೆ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಾವೂರು ಗ್ರಾ.ಪಂ ಅಧ್ಯಕ್ಷ ಗಣೇಶ್ ಗೌಡ ನಾವೂರು, ಮಿತ್ತ ಬಾಗಿಲು ಗ್ರಾ. ಪಂ ಉಪಾಧ್ಯಕ್ಷರಾದ ವಿನಯ ಕುಮಾರ್ ಸೇನದಬೆಟ್ಟು, ಕಿಲ್ಲೂರು ಶಾಲಾ
ಹೆಚ್.ಎಂ ರಮೇಶ್ ಪೈಲಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಪೂಜಾರಿ, ಕಡಿರುದ್ಯಾವರ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್, ಮಲವಂತಿಗೆ ಗ್ರಾ.ಪಂ ಉಪಾಧ್ಯಕ್ಷ ದಿನೇಶ್ ಗೌಡ, ತೀಕ್ಷಿತ್ ದಿಡುಪೆ, ಪ್ರಮೋದ್ ದಿಡುಪೆ, ಕೇಶವ ಫಡಕೆ ಮೊದಲಾದವರು ಉಪಸ್ಥಿತರಿದ್ದರು.