ಬಾಣಂತಿ ಮತ್ತು ಶಿಶುಗಳ ಸಾವಿನ ಪ್ರಕರಣ: ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಹತ್ವದ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ
ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಹೊಸ ಮಾರ್ಗಸೂಚಿ:
ಇನ್ನು ಮುಂದೆ ತುರ್ತು ಆರೋಗ್ಯ ಸೇವೆಯನ್ನು ನೀಡುವ ವೇಳೆ ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಗಳು ಸಲ್ಲಿಸುವ ಅವಶ್ಯಕತೆ ಎದುರಾಗುವುದಿಲ್ಲ.
ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯವಾಗಿದ್ದು, ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯ ತೆ , ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಬಿತವಾಗಿರಬಾರದು. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯು ಯಾವುದೇ ರೀತಿಯ ದಾಖಲೆಗಳನ್ನು ನೀಡಲು ಒತ್ತಾಯಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನು ನಿವಾರಿಸುವುದು ವೈದ್ಯರ , ಶುಶ್ರೂಷಕರ, ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿದೆ.
ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಿಸಿದರೆ ಅಂತಹ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ ಅಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.