ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ:ಪೋಕ್ಸೋ ದೂರು ನೀಡಿದ ಮಹಿಳೆಯ ಸಾವಿನ ತನಿಖೆಗೆ ದಲಿತಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕಿನ ಮುಖಂಡರಿಂದ ಸರಕಾರಕ್ಕೆ ಮನವಿ
ಬೆಳ್ತಂಗಡಿ: ಅಪ್ರಾಪ್ತೆ ಪುತ್ರಿ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ, ಪೋಕ್ಸೋ ದೂರು ನೀಡಿದ ಮಹಿಳೆಯ ಅನುಮಾನಾಸ್ಪದ ಸಾವಿನ ತನಿಖೆಗೆ ದಲಿತ ಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕಿನ ಮುಖಂಡರು , ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಆಗ್ರಹಿಸಿದ್ದಾರೆ.
ಮರಣ ಹೊಂದಿದ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಮಾಡದೆ ದಹನ ಮಾಡಿರುವುದು ಇನ್ನಷ್ಟು ಅನುಮಾನಕ್ಕೀಡು ಮಾಡಿದೆ. ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸರಕಾರಕ್ಕೆ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಮೂಲಕ ಮನವಿಯಲ್ಲಿ ಆಗ್ರಹಿಸಿದ್ದಾರೆ. ಇಲ್ಲವಾದರೆ ರಾಜ್ಯದ ದಲಿತ ಸಮುದಾಯ ಹಾಗೂ ಮಹಿಳೆಯರು ಒಟ್ಟಾಗಿ ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗುವಂತೆ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತಕ್ಷಣ ಬಂಧಿಸಲು ಆಗ್ರಹಿಸಿ ಮತ್ತು ಮಹಿಳೆಯರ ಘನತೆ ಎತ್ತಿಹಿಡಿಯಲು ನಡೆಯುವ ಮೇ.30 ರ ಹಾಸನ ಚಲೋ ಹೋರಾಟದಲ್ಲಿ ಬೆಳ್ತಂಗಡಿ ಯಿಂದ ಸುಮಾರು 55 ಜನ ಭಾಗವಹಿಸುತ್ತೇವೆ ಎಂದು ಹೇಳಿದರು.
ಘಟನೆಯ ವಿವರ: 17 ವರ್ಷದ ತಮ್ಮ ಅಪ್ರಾಪ್ತೆ ಪುತ್ರಿ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು 53 ವರ್ಷ ಪ್ರಾಯದ ಮಹಿಳೆಯೊಬ್ಬರು ಬೆಂಗಳೂರಿನ ಸದಾಶಿವ ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಮಾರ್ಚ್ 14 ರಂದು ಯಡಿಯೂರಪ್ಪ ಅವರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಪ್ರಸ್ತುತ ಪ್ರಕರಣ ಸಿಬಿಐಗೆ ವಹಿಸಿ ತನಿಖೆ ನಡೆಯುತ್ತಿದೆ. ಆದರೆ ಇದೀಗ ದೂರು ನೀಡಿದ ಮಹಿಳೆ ಹುಳಿಮಾವು ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ ಸಾವಿನಲ್ಲಿ ಅನುಮಾನ ಮೂಡುವಂತಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸದೇ ದಹನ ಮಾಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ದಲಿತ ಹಕ್ಕು ಸಮಿತಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದೆ