ಪ್ರವರ್ಗ- 1 ರಲ್ಲಿರುವ ಹಿಂದುಳಿದ ಜಾತಿಯ ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡುವ ಹುನ್ನಾರದ ವಿರುದ್ಧ ಪ್ರತಿಭಟನೆಗೆ ದಲಿತ ಸಂಘಟನೆ ಗಳಿಂದ ಕರೆ : ಸುದ್ದಿಗೋಷ್ಠಿ
ಗುರುವಾಯನಕೆರೆ: ಪ್ರವರ್ಗ- 1 ರಲ್ಲಿರುವ ಹಿಂದುಳಿದ ಜಾತಿಯ ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡುವ ಹುನ್ನಾರದ ವಿರುದ್ಧ ಪ್ರತಿಭಟನೆಗೆ ದಲಿತ ಸಂಘಟನೆ ಗಳಿಂದ ಕರೆ ನೀಡಿದ್ದು, ರಾಜ್ಯ ಸರಕಾರವು ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡಲು ಮುಂದಾದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ನಡೆಯಲಿದೆ ಎಂದು ಮೊಗೇರ ಹಿತ ಚಿಂತನ ವೇದಿಕೆ ಮತ್ತು ದಲಿತ ಸಂಘಟನೆಗಳು ಎ.3 ರಂದು ನಾಗರಿಕ ಸೇವಾ ಟ್ರಸ್ಟ್ ಸಭಾಭವನ ಗುರುವಾಯನಕೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
ಮೀನುಗಾರ ಮೊಗೇರರು ಬಾಹ್ಯ ಪ್ರಭಾವ ಮತ್ತು ರಾಜಕೀಯ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆಯಲು ಹುನ್ನಾರ ನಡೆಸಿದ್ದು, ಜೆ.ಸಿ ಪ್ರಕಾಶ್ ಅವರು ನೀಡಿದ ವರದಿಯನ್ನು ತಿರಸ್ಕರಿಸಬೇಕು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹೇಳಿದರು.
ಜೆ.ಸಿ ಪ್ರಕಾಶ್ ಹಿರಿಯ ಶ್ರೇಣಿಯ IAS ಅಧಿಕಾರಿಗಳು ಹಾಗೂ ಇನ್ನಿತರ ನಾಲ್ಕು ಅಧಿಕಾರಿಗಳನ್ನೊಳಗೊಂಡ ಮೊಗೇರ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ಸಮಿತಿಯ ಅಂತಿನ ವರದಿಯನ್ನು ರಾಜ್ಯ ಸರಕಾರವು ಯಾವ ಕಾರಣಕ್ಕೂ ಸ್ವೀಕರಿಸಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಅಶೋಕ್ ಕೊಂಚಾಡಿ, ಜಿಲ್ಲಾ ಮೊಗೇರ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ರಾಜ್ಯ ಮೊಗೇರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ, ಮೊಗೇರ ಚಿಂತನ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷರಾದ ಕೊರಗಪ್ಪ ಅಳದಂಗಡಿ, ಸುಂದರ ಇಂದಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.