ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ 3 ಮಂದಿಯ ಹತ್ಯೆ ಶಂಕೆ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲು ಎಸ್‌ಡಿಪಿಐ ಆಗ್ರಹ
ಬೆಳ್ತಂಗಡಿ; ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕಿನ ಮೂರು ಮಂದಿಯ ಹತ್ಯೆ ನಡೆದಿದ್ದ ಶಂಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದೆ. ರಾಜ್ಯ ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಸ್ಪೆಷಲ್ ಇನ್ವೆಸ್ಟಿಗೇಷನ್ ತಂಡ ನೇಮಿಸಿ ಸೂಕ್ತ ತನಿಖೆ ನಡೆಸಬೇಕೆಂದು ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ನವಾಝ್ ಕಟ್ಟೆ ಆಗ್ರಹಿಸಿದರು.
ವ್ಯವಹಾರ ನಿಮಿತ್ತ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್(45) , ಮದ್ದಡ್ಕ ನಿವಾಸಿ ಇಸಾಕ್(56) , ಶಿರ್ಲಾಲ್ ನಿವಾಸಿ ಇಮ್ತಿಯಾಝ್(34) ಅವರನ್ನು ತುಮಕೂರಿಗೆ ಕರೆಸಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಇಂತಹ ಕ್ರೂರ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಮತ್ತು ಮರಣ ಹೊಂದಿದ ಅಮಾಯಕರ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.