ವೇಣೂರು ಹಿದಾಯಾತುಲ್ ಇಸ್ಲಾಂ ಮದ್ರಸ ಇಲ್ಲಿನ ಮುಖ್ಯ ಅಧ್ಯಾಪಕರಾಗಿದ್ದ ಕಾರ್ಕಳ ಹೊಸ್ಮಾರು ನಿವಾಸಿ ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ
ಬೆಳ್ತಂಗಡಿ: ವೇಣೂರು ಹಿದಾಯಾತುಲ್ ಇಸ್ಲಾಂ ಮದ್ರಸ ಇಲ್ಲಿನ ಮುಖ್ಯ ಅಧ್ಯಾಪಕರಾಗಿದ್ದ ಕಾರ್ಕಳ ಹೊಸ್ಮಾರು ನಿವಾಸಿ ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ (ಅದ್ದು ಉಸ್ತಾದ್) (43) ಅವರು ಕರ್ತವ್ಯದಲ್ಲಿರುವಂತೆಯೇ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥತಗೊಂಡು ಅ.15 ರಂದು ಕೊನೆಯುಸಿರೆಳೆದಿದ್ದಾರೆ.
ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮದರಸಗಳಲ್ಲಿ ಇಂದು ಅಂತಿಮ ಪರೀಕ್ಷೆ ನಡೆದಿದ್ದು, ತನ್ನ ಕರ್ತವ್ಯ ಮುಗಿಸಿ ಬೆಳಗ್ಗಿನ ಉಪಹಾರ ಮಾಡುತ್ತಿದ್ದಾಗ ತಲೆತಿರುಗಿದಂತಾಗಿ ವಾಂತಿ ಮಾಡಿದ್ದರು.ತಕ್ಷಣ ಅವರನ್ನು ಸ್ಥಳೀಯ ಕ್ಲಿನಿಕ್‌ನಲ್ಲಿ, ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತರಾಗಿರುವುದಾಗಿ ವೈದ್ಯರು ಪ್ರಕಟಿಸಿದರು.
ಎಸ್ಸೆಸ್ಸೆಫ್ ಸಂಘಟನೆಯಲ್ಲಿ ಕಾರ್ಕಳ ಡಿವಿಷನ್ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಪ್ರಸ್ತುತ ಎಸ್‌ವೈಎಸ್ ಸ್ವಯಂ ಸೇವಾ ಸಂಘಟನೆ “ಟೀಮ್ ಹಿಸಾಬಾ” ಇದರ ಕ್ಯಾಪ್ಟನ್ ಆಗಿದ್ದರು.
ಹಲವೆಡೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರು ಎರಡು ವಾರಗಳ ಹಿಂದಷ್ಟೇ ವೇಣೂರಿನ ಮದರಸಕ್ಕೆ ಕರ್ತವ್ಯಕ್ಕೆ ಸೇರಿದ್ದರು. ಕಾರ್ಕಳದ ಅಜೆಕಾರು ಶಿರ್ಲಾಲಿನಲ್ಲಿ ಕರ್ತವ್ಯ ದಲ್ಲಿದ್ದ ವೇಳೆ ಅಲ್ಲಿ ಮಸೀದಿ ನಿರ್ಮಾಣವಾಗುವಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು.
ಬುರ್ದಾ ಸಂಘಟನೆ, ಮಕ್ಕಳ ಪ್ರತಿಭಾ ಕಾರ್ಯಕ್ರಮಗಳ ತೀರ್ಪುಗಾರಿಕೆ, ಮದ್ಹ್ ಹಾಡುಗಾರರಾಗಿ, ಪ್ರಿಂಟಿಂಗ್, ವಿನ್ಯಾಸ, ಪ್ರತಿಭಾ ವೇದಿಕೆ, ಮೀಲಾದ್ ವೇದಿಕೆ ವಿನ್ಯಾಸ, ಮಸೀದಿ ಮದರಸಗಳಲ್ಲಿ ಸಾಮೂಹಿಕ ಅಡುಗೆ ತಯಾರಿಕೆ, ಸುನ್ನೀ ಸಂಘಟನೆಗಳು ಹಾಗೂ ಮುಅಲ್ಲಿಮ್ ಸಂಘಟನೆಗಳ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಅರ್ಹ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕಾಗಿ ಸಹಾಯಧನ ಸಂಗ್ರಹಿಸಿ ನೀಡುವುದು ಹಾಗೂ ಝಿಯಾರತ್ ಟೂರ್ ಗಳನ್ನು ಸಂಘಟಿಸುವುದು ಹೀಗೆ ಎಲ್ಲಾ ರೀತಿಯಿಂದ ಜನರ ಮೆಚ್ಚುಗೆ ಗಳಿಸಿದ್ದರು. ಹೊಸ ಮನೆ ನಿರ್ಮಿಸಿದ್ದು ಮೂರು ವಾರಗಳ ಹಿಂದಷ್ಟೇ ಗೃಹ ಪ್ರವೇಶ ನಡೆದಿತ್ತು.ಇದೀಗ ಮನೆಯ ಯಜಮಾನನ ಈ ದಿಢೀರ್ ಸಾವಿನಿಂದ ಮನೆ ಮಂದಿ ಶೋಕದಲ್ಲಿ ಮುಳುಗಿದ್ದಾರೆ.
ಮೃತರು ತಾಯಿ ನೆಫೀಸಮ್ಮ, ಪತ್ನಿ ರಂಳತ್, ಮೂವರು ಹೆಣ್ಣು ಮಕ್ಕಳಾದ ಮಾಶಿತಾ, ಅನ್ಸೀರಾ ಮತ್ತು ಬಿಶಾರಾ, ಸಹೋದರಾದ ಅಬ್ಬಾಸ್, ಇಸ್ಮಾಯಿಲ್ ಮತ್ತು ಹುಸೈನ್ ಸಅದಿ, ಸಹೋದರಿ ಬೀಫಾತಿಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.