• December 27, 2024

ಕಲಾಮಾಣಿಕ್ಯ, ಅಕ್ಷರಬ್ರಹ್ಮ ವಿಜಯಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ’ಶಿವಧೂತೆ ಗುಳಿಗೆ’ ನಾಟಕಕ್ಕೆ ಗಿನ್ನೆಸ್ ರೆಕಾರ್ಡ್‌:ಒಂದೇ ನಾಟಕ ಐದು ಭಾಷೆಯಲ್ಲಿ ಪ್ರದರ್ಶನ

 ಕಲಾಮಾಣಿಕ್ಯ, ಅಕ್ಷರಬ್ರಹ್ಮ ವಿಜಯಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ’ಶಿವಧೂತೆ ಗುಳಿಗೆ’ ನಾಟಕಕ್ಕೆ ಗಿನ್ನೆಸ್ ರೆಕಾರ್ಡ್‌:ಒಂದೇ ನಾಟಕ ಐದು ಭಾಷೆಯಲ್ಲಿ ಪ್ರದರ್ಶನ

 

ಮಂಗಳೂರು: ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದರ್ಶನ ಮತ್ತು ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸುವ ಮೂಲಕ ದಾಖಲೆ ಬರೆದ ಕಲಾಮಾಣಿಕ್ಯ, ಅಕ್ಷರಬ್ರಹ್ಮ ವಿಜಯಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ’ಶಿವಧೂತೆ ಗುಳಿಗೆ’ ನಾಟಕ ಗಿನ್ನೆಸ್ ರೆಕಾರ್ಡ್‌ನತ್ತ ದಾಪುಗಾಲು ಇಟ್ಟಿದೆ.

ಈಗಾಗಲೇ ತುಳು ಮತ್ತು ಕನ್ನಡದಲ್ಲಿ ದೇಶ ವಿದೇಶದಲ್ಲಿ ಇಲ್ಲಿವರೆಗೆ 484 ಪ್ರದರ್ಶನ ಮೂಲಕ ದಾಖಲೆಯ ಶೋ ಕಂಡ ಈ ನಾಟಕ ಮಲಯಾಳಂ, ಮರಾಠಿ, ಇಂಗ್ಲಿಷ್ ಭಾಷೆಯಲ್ಲೂ ಪ್ರದರ್ಶನ ಕಾಣಲಿದೆ. ಇಲ್ಲಿಯವರೆಗೆ ಯಾವುದೇ ನಾಟಕ ಒಬ್ಬನ ನಿರ್ದೇಶನದಲ್ಲಿ ಐದು ಭಾಷೆಯಲ್ಲಿ ಪ್ರದರ್ಶನ ಕಂಡಿಲ್ಲ. ಸದ್ಯದಲ್ಲೇ ಐದು ಭಾಷೆಯಲ್ಲಿ ಶೋ ಕಾಣುವ ಮೂಲಕ ವಿಜಯಣ್ಣ ಗಿನ್ನೆಸ್ ರೆಕಾರ್ಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ.

ಸದಾ ಒಂದಿಲ್ಲೊಂದು ಪ್ರಯೋಗಗಳ ಮೂಲಕ ತುಳು ರಂಗಭೂಮಿಯನ್ನು ಜೀವಂತವಾಗಿರಿಸುವಲ್ಲಿ ವಿಶೇಷ ಕೊಡುಗೆ ನೀಡುತ್ತಿರುವವರು ಕೋಡಿಯಾಲ್‌ಬೈಲ್‌ರವರ ಈ ನಾಟಕ ಈಗಾಗಲೇ ರಾಜ್ಯಾದ್ಯಂತ ಚರಿತ್ರೆ ಸೃಷ್ಟಿಸಿ ವಿದೇಶದಲ್ಲೂ ಮೋಡಿ ಮಾಡಿದ್ದು, ತುಳುರಂಗಭೂಮಿ ನಿರ್ದೇಶಕರು ಮತ್ತೊಂದು ಐತಿಹಾಸಿಕ ದಾಖಲೆ ಮಾಡಲು ಹೊರಟಿದೆ. ಈಗಾಗಲೇ ಮಲಯಾಲಂ ಸ್ಕ್ರಿಪ್ಟ್ ಕೂಡ ಸಿದ್ಧಗೊಂಡಿದ್ದು, ಇಂಗ್ಲಿಷ್‌ಗೂ ಭಾಷಾಂತರ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ವಿಜಯಕುಮಾರ್ ಕೊಡಿಯಾಲಬೈಲ್.

ದೇಶಾದ್ಯಂತ ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದ ಹವಾ ಸೃಷ್ಟಿಸಿದ್ದರೂ, ತುಳುನಾಡು ಸಹಿತ ಹೊರ ರಾಜ್ಯಾದ್ಯಂತ ಮೂರು ವರ್ಷದ ಹಿಂದೆಯೇ ಅಂತಹ ಹವಾ ಸೃಷ್ಟಿಸಿದ್ದ ಕೀರ್ತಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರದ್ದು… ಶಿವಧೂತೆ ಗುಳಿಗೆ’ ಎಂಬ ವಿಭಿನ್ನ ರಂಗ ಪ್ರಯೋಗದ ಮೂಲಕ ಅಂದು ಸೃಷ್ಟಿಸಿದ ಹವಾ ಇಂದು ಅದಕ್ಕಿಂತ ದುಪ್ಪಟ್ಟಾಗಿದೆ ಎನ್ನುವುದಕ್ಕೆ ನಾಟಕ ಪ್ರದರ್ಶನಕ್ಕೆ ಸೇರುವ ಜನಸಾಗರವೇ ಸಾಕ್ಷಿ… ಯಾವ ಮೂಲೆಯಲ್ಲಿ ರಂಗಪ್ರದರ್ಶನ ಕಂಡರೂ ಸಾವಿರಾರು ಜನ ಸೇರುತ್ತಾರೆ ಎನ್ನುವುದಕ್ಕೆ ಎರಡು ಮಾತಿಲ್ಲ…

ದೈವಾರಾಧನೆ ಎನ್ನುವುದು ಕೇವಲ ಆಚರಣೆಯಲ್ಲ, ಅದೊಂದು ತುಳುನಾಡಿನ ಸಂಸ್ಕೃತಿಯೂ ಹೌದು.. ಎನ್ನುವುದನ್ನು ಅದ್ಭುತ ರಂಗಪ್ರಯೋಗದ ಮೂಲಕ ತೋರಿಸಿಕೊಟ್ಟವರು ಕೊಡಿಯಾಲ್‌ಬೈಲ್. ತುಳು ರಂಗಭೂಮಿಯ ನಿಗದಿತ ಚೌಕಟ್ಟು ಮೀರಿ, ಹಾಸ್ಯದ ಲೆಕ್ಕಾಚಾರವನ್ನೂ ಬದಿಗಿರಿಸಿ ವಿಜಯ್‌ಕುಮಾರ್ ಕೊಡಿಯಾಲಬೈಲ್ ನಿರ್ದೇಶನದಲ್ಲಿ ಸೃಷ್ಟಿಯಾದ ‘ಶಿವದೂತೆ ಗುಳಿಗೆ’ ತುಳು ರಂಗಭೂಮಿಯಲ್ಲಿ ಕ್ಷಿಪ್ರ ಸಮಯದಲ್ಲಿ ದಾಖಲೆಯ ಪ್ರದಶನದ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದೆ. ಇದೀಗ 500ನೇ ಪ್ರದರ್ಶನದತ್ತ ದಾಪುಗಾಲು ಇಡುತ್ತಿದ್ದು, ನಾಟಕದ ಕನ್ನಡ ಅವತರಣಿಕೆಗೆಗೂ ಭರ್ಜರಿ ರೆಸ್ಪಾನ್ಸ್ ದೊರೆತು ನಾಟಕದ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದೆ.

ತುಳುನಾಡಿನ ಕಾರಣಿಕಶಕ್ತಿ ಗುಳಿಗನ ಹುಟ್ಟು- ಬದುಕು, ಶಕ್ತಿಯ ನೆಲೆಯನ್ನು ತುಳುರಂಗಭೂಮಿಯ ಪರಿಧಿಯಲ್ಲಿ ನಿರೀಕ್ಷೆಗೂ ಮೀರಿದ ಸ್ವರೂಪದಲ್ಲಿ ಪ್ರದರ್ಶನ ನೀಡಿದ ಬಗೆ ಅದ್ವಿತೀಯ. ಶೇಷಶಯನ ವಿಷ್ಣುವಿನ ಕ್ಷೀರಸಾಗರ ಬಿಂಬಿಸುವ ದೃಶ್ಯಗಳು, ಶಿವಪಾರ್ವತಿ ವಿರಾಜಮಾನರಾಗುವ ಕೈಲಾಸ ಪರ್ವತ, ನೆಲವುಲ್ಲ ಸಂಕೆಯೆ ಅಬ್ಬರ ಇತ್ಯಾದಿ ಪರಿಕಲ್ಪನೆಗಳು ರಂಗವೇದಿಕೆಯಲ್ಲಿ ಈಗಾಗಲೇ ಹೊಸ ಸಂಚಲನ ಸೃಷ್ಟಿಸಿದೆ… ಭಾರಿ ವೆಚ್ಚದಲ್ಲಿ ವಿಭಿನ್ನವಾಗಿ ರೂಪಿಸಿದ ರಂಗವೇದಿಕೆ, ಕ್ಷಣಾರ್ಧದಲ್ಲಿ ಬದಲಾಗುವ ಕೈಲಾಸ ಮತ್ತು ವೈಕುಂಠಗಳ ದೃಶ್ಯಗಳು, ಮಿಂಚು ಹರಿಸುವ ಬೆಳಕಿನ ಚಿತ್ತಾರದಲ್ಲಿ ರಂಗ ವಿನ್ಯಾಸ ವಿಶಿಷ್ಟವಾಗಿ ಮೂಡಿಬಂದಿದೆ. ಸಂಪೂರ್ಣ ಕತ್ತಲ ನಡುವೆ ಗುಳಿಗ ದೈವ ವೇದಿಕೆಗೆ ಪ್ರವೇಶವಾಗುವ ದೃಶ್ಯ, ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಕತ್ತಲಲ್ಲಿ ಚಲಿಸುವ ಗುಳಿಗ ದೈವದ ಘನಘೋರ ಮುಖ, ಜೀಟಿಗೆ ಇವೆಲ್ಲ ನಾಟಕದ ಪ್ರಮುಖ ಅಂಶಗಳು.

ಗುಳಿಗನಾಗಿ ಅಭಿನಯಿಸಿದ ನಟ ಸ್ವರಾಜ್ ಶೆಟ್ಟಿ ನಟನೆ ಪ್ರೇಕ್ಷಕ ವರ್ಗದಿಂದ ಈಗಾಗಲೇ ಶಹಬ್ಬಾಸ್‌ಗಿರಿ ಪಡೆದಿದೆ. ರಮೇಶ್ ಕಲ್ಲಡ್ಕ, ರಜಿತ್ ಕದ್ರಿ, ನಿತೇಶ್ ಪೂಜಾರಿ ಏಳಿಂಜರ, ಪ್ರೀತೇಶ್ ಬಳ್ಳಾಲ್‌ಬಾಗ್, ವಿನೋದ್‌ರಾಜ್ ಕೋಕಿಲ, ವಿಶಾಲ್‌ರಾಜ್ ಕೋಕಿಲ, ಜಯರಾಮ್, ಸಾಗರ್ ಮಡಂತ್ಯಾರು, ಸುದರ್ಶನ್, ವೀರ ವಸಂತ್, ರಕ್ಷಿತಾ ಸಹಿತ ಹಲವರ ಪಾತ್ರ ನಾಟಕಕ್ಕೆ ಹೊಸ ಸ್ವರೂಪ ನೀಡಿದೆ.

ಪೂರ್ವಮುದ್ರಿತಗೊಳಿಸಿರುವ ನಾಟಕದ ಸಂಭಾಷಣೆ, ಅದರಲ್ಲಿ ಹಿರಿಯ ಕಲಾವಿದರ ಧ್ವನಿ ಗುಳಿಗನ ನಾಟಕಕ್ಕೆ ಆಕರ್ಷಣೆ. ಗುಳಿಗ ಪಾಡ್ದನದ ಬಗ್ಗೆ ಬಾಬು ಬಳ್ಳಾಜೆ ಮತ್ತು ತುಳು ಜನಪದ ವಿದ್ವಾಂಸರಾದ ಪ್ರೊ.ವಿವೇಕ್ ರೈ, ದಯಾನಂದ ಕತ್ತಲ್‌ಸಾರ್, ಡಾ.ಗಣೇಶ್ ಅಮೀನ್ ಸಂಕಮಾರ್ ಅವರಲ್ಲಿ ಅವಲೋಕಿಸಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಬರೆದ ಪುಸ್ತಕವನ್ನು ಆಧರಿಸಿ ಖ್ಯಾತ ರಂಗಕರ್ಮಿ ಪರಮಾನಂದ ಸಾಲ್ಯಾನ್‌ರವರು ಗುಳಿಗ ಪಾರ್ದನವನ್ನೇ ನಾಟಕವನ್ನಾಗಿಸಿ ಸಂಭಾಷಣೆ ಹೆಣೆದಿದ್ದಾರೆ.

ದೃಶ್ಯ ಸಮ್ಮಿಲನ

ದೈವದ ಬಗ್ಗೆ ತಿಳಿವಳಿಕೆಯೇ ಇಲ್ಲದ ಆಧುನಿಕ ಮನೋಭಾವನೆಯ ಯುವಕನೋರ್ವನಿಗೆ ಗುಳಿಗ ದೈವದ ಕತೆಯನ್ನು ಹೇಳುವ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕ ಮೈ ನವಿರೇಳಿಸುವ ದೃಶ್ಯಗಳಿಂದ ಕೂಡಿದೆ. ಕೈಲಾಸ, ವೈಕುಂಠ, ಪುರಾತನ ಕಾಲದ ಮನೆ, ದೈವಸ್ಥಾನ ಇತ್ಯಾದಿ ದೃಶ್ಯಾವಳಿಗಳನ್ನು ಕಾಯುವ ಅವಕಾಶವನ್ನೇ ಕೊಡದೆ ಒಂದೆರಡು ನಿಮಿಷಗಳಲ್ಲಿಯೇ ಬದಲಿಸಿ ಬಿಡುವ ಕೈ ಚಳಕ ಅದ್ಭುತ. ನವ್ಯ ಮತ್ತು ಪೌರಾಣಿಕ ನಾಟಕದ ದೃಶ್ಯ ಸಂಯೋಜನೆಯ ಸಮ್ಮಿಲನ ಮನಮೋಹಕ.

ಕಾಂತಾರದ ಗುರುವ

ಕಾಂತಾರ ಸಿನಿಮಾದಲ್ಲಿ ಎಲ್ಲರಲ್ಲೂ ಕುತೂಹಲ ಮತ್ತು ಮನಸ್ಸಿನಲ್ಲಿ ಉಳಿದ ಪಾತ್ರ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ. ಆದರೆ ’ಶಿವಧೂತೆ ಗುಳಿಗೆ’ ನಾಟಕದಲ್ಲಿ ಸ್ವರಾಜ್ ಶೆಟ್ಟಿ ಗುಳಿಗ ಪಾತ್ರಧಾರಿ ಮೂಲಕ ಎರಡು ವರ್ಷದ ಮೊದಲೇ ತುಳುನಾಡಿನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.——

ಎ.ಕೆ.ವಿಜಯ್ ಕೋಕಿಲ ಗಿಮಿಕ್

ಸುಮಾರು ಎರಡುವರೆ ಗಂಟೆಯ ರಂಗರೂಪಕ್ಕೆ ಸಂಗೀತವೂ ಪ್ಲಸ್ ಪಾಯಿಂಟ್. ಎ.ಕೆ.ವಿಜಯ್ ಕೋಕಿಲರವರ ಸಂಗೀತ ರಂಗಾಸಕ್ತರ ಮನಸೆಳೆಯುತ್ತಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಧ್ವನಿಯಲ್ಲಿ ಮೂಡಿಬಂದ ರೂಪೊಡು ಕಗರ್ಂಡ ಕರಿಯೆ.., ದೇವದಾಸ್ ಕಾಪಿಕಾಡ್ ಅವರ ಆರತಿ.. ಆರತಿ.. ಧೂಪದಾರತಿ, ರವೀಂದ್ರ ಪ್ರಭು, ಡಾ.ವೈಷ್ಣವಿ ನರಸಿಂಹ ಕಿಣಿ ಹಿನ್ನೆಲೆ ಗಾಯನ ಮತ್ತೆ ಮತ್ತೆ ಕೇಳಿಸುವಂತೆ ಮಾಡುತ್ತಿದೆ…

ಅಕ್ಷರಬ್ರಹ್ಮನ ಮ್ಯಾಜಿಕ್

ಶಿವದೂತೆ ಗುಳಿಗೆ ಎನ್ನುವ ಹೆಸರಿನ ಪೌರಾಣಿಕ ಟಚ್ ಇರುವ ತುಳು ನಾಟಕವನ್ನು ವಿನೂತನ ಶೈಲಿಯಲ್ಲಿ ರಂಗಕ್ಕೆ ತಂದಿದ್ದು, ಸೂಪರ್‌ಹಿಟ್ ಎನಿಸಿಕೊಂಡಿದ್ದಾರೆ. ದಶಕದ ಹಿಂದೆ ಮಕಾಡೆ ಮಲಗಿದ್ದ ತುಳು ಚಲನಚಿತ್ರ ರಂಗವನ್ನು ’ಒರಿರ್ಯದೊರಿ ಅಸಲ್’ ಎಂಬ ನಾಟಕವನ್ನು ಚಿತ್ರವನ್ನಾಗಿಸಿ ಯಶಸ್ವಿ ಗಳಿಸಿದ್ದ ವಿಜಯ್ ಕುಮಾರ್ ರಂಗಭೂಮಿಯಲ್ಲಿ ಮತ್ತೆ ವಿಜೃಂಭಿಸಿದ್ದಾರೆ.

ವಿಭಿನ್ನ ಶೈಲಿಯ ತುಳು ನಾಟಕ

ಕಾಂತಾರ ಸಿನಿಮಾದಲ್ಲಿ ಗುಳಿಗನ ಅಬ್ಬರ ಕಂಡು ಕುತೂಹಲದಿಂದ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳ ಜನರು ಗುಳಿಗ ದೈವದ ವಿಶೇಷತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕರಾವಳಿಯಲ್ಲಿ ಗುಳಿಗನ ಮಹಿಮೆಯನ್ನು ಸಾರುವ ನಾಟಕ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಲು ಆಹ್ವಾನ ಬಂದಿದ್ದು, ಕೆಲವೆಡೆ ಈಗಾಗಲೇ ಪ್ರದರ್ಶನ ಕಂಡಿದ್ದು, ಕನ್ನಡಿಗರೂ ಕೊಂಡಾಡುವಂತೆ ಮಾಡಿದೆ.

ಅದ್ದೂರಿ ಕಾರ್ಯಕ್ರಮಕ್ಕೆ ಸಜ್ಜು

ಕಲಾಸಂಗಮ ಕಲಾವಿದರ ಒಗ್ಗೂಡುವಿಕೆಯ ಶಿವಧೂತೆ ಗುಳಿಗೆ’ ನಾಟಕ ಕರ್ನಾಟಕ ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದ್ದು, ಮೇ ತಿಂಗಳ ಅಂತ್ಯಕ್ಕೆ 500ನೇ ಪ್ರದರ್ಶನ ಕಾಣಲಿದೆ. ತುಳು ಮಾತ್ರವಲ್ಲ ಕನ್ನಡಿಗನನ್ನೂ ಮತ್ತೆ ರಂಗಭೂಮಿಯತ್ತ ಸೆಳೆಯುವಂತೆ ಮಾಡಿದ್ದು, 500ನೇ ಪ್ರದರ್ಶನವನ್ನು ಮಂಗಳೂರಿನಲ್ಲಿ ಅದ್ದೂರಿಯಾಗಿ ಆಯೋಜಿಸಲು ತಂಡ ಸಜ್ಜಾಗಿದ್ದು, ಚಿತ್ರರಂಗದ ಪ್ರಮುಖರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನುತ್ತಾರೆ ಕೊಡಿಯಾಲಬೈಲ್.

ಕಳೆದ ಬಾರಿ ಕೈಕೊಟ್ಟಿದ್ದ ಲಾಕ್‌ಡೌನ್

ವಿಜಯಕುಮಾರ್ ಕೊಡಿಯಾಲ್ ಬೈಲ್ ಶಿವದೂತೆ ಗುಳಿಗೆ ಎನ್ನುವ ಪೌರಾಣಿಕ ಕಥಾನಕವನ್ನು ಲಾಕ್‌ಡೌನ್‌ಗಿಂತ ಮೊದಲೇ ರಂಗಕ್ಕೆ ತರಲು ತಯಾರಿ ನಡೆಸಿದ್ದರು. ನಾಟಕ ರಚನೆಯಿಂದ ತೊಡಗಿ ರಂಗಸಜ್ಜಿಕೆ ಎಲ್ಲವೂ ರೆಡಿಯಾಗಿತ್ತು. ಅನೇಕ ಕಡೆ ಪ್ರದರ್ಶನಕ್ಕೆ ಬುಕ್ಕಿಂಗ್ ಕೂಡ ನಿಗದಿಯಾಗಿದ್ದವು. ಆದರೆ ಕರೊನಾ ಲಾಕ್‌ಡೌನ್ ನಾಟಕ ಪ್ರದರ್ಶನ ಸಾಧ್ಯವಾಗದಂತೆ ಮಾಡಿತ್ತು. ಈ ಬಾರಿಯ ಸೀಝನ್‌ನಲ್ಲಿ ಮತ್ತೆ ಶಿವದೂತೆ ಗುಳಿಗೆ ಯಶಸ್ಸು ಕಂಡಿದ್ದು, ವಿಜಯಕುಮಾರ್ ಅವರ ಖ್ಯಾತಿಯನ್ನು ಮತ್ತಷ್ಟು ಎತ್ತರಿಸಿದೆ.

ಶ್ರೇಷ್ಠ ಕಲಾವಿದರಿಂದ ಕಂಠದಾನ

ರವೀಂದ್ರ ಪ್ರಭು, ವಿಶಾಲ್ ರಾಜ್ ಕೋಕಿಲ ಮತ್ತು ಡಾ.ವೈಷ್ಣವಿಯವರ ಹಿನ್ನೆಲೆ ಧ್ವನಿಯೂ ಇದೆ. ಜನಪದ ವಿದ್ವಾಂಸ ಕೆ.ಕೆ.ಪೇಜಾವರ ಸಾಹಿತ್ಯ ನೀಡಿ ಮೈಮ್ ರಾಮದಾಸ್ ಅವರು ಹಾಡಿರುವ ಸೂಪರ್ ಹಿಟ್ ಆಗಿರುವ ಅಂಬರಾ ಮರ್ಲೆ ಅಬತಾರ ಪುರುಷೆ ..ಗಿಂಡೆ ಗಿಲೊರ್ಂಡೆ ಶಿವಧೂತೆ ಗುಳಿಗೆ.. ಹಾಡು ಎಲ್ಲರ ಮನೆ ಮಾತಾಗಿದೆ. ನಾಟಕದ ಪ್ರೋಮೊ ಕೂಡ ಇದೇ ಹಾಡಿನಿಂದಾಗಿ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯುವ ಸಾಹಿತಿ ಅರುಣ್ ಉಳ್ಳಾಲ್, ವಿಠಲ್ ಅದ್ಯಪಾಡಿ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಇಡೀ ನಾಟಕದ ಸಂಭಾಷಣೆಯು ಮುದ್ರಿತ ಧ್ವನಿಯಲ್ಲಿದ್ದು ಅನೇಕ ಶ್ರೇಷ್ಠ ಕಲಾವಿದರು ಕಂಠದಾನ ನೀಡಿದ್ದಾರೆ.

ಕೊರತೆ ನೀಗಿಸಿದ ಕೋಡಿಯಾಲ್‌ಬೈಲ್

ನವ್ಯ, ಪೌರಾಣಿಕ ಅದ್ದೂರಿ ದೃಶ್ಯ ಸಂಯೋಜನೆಯ ಸಂಗಮ ಪೌರಾಣಿಕ ದೇವ, ದೇವತೆಗಳ, ರಾಮಾಯಣ ಮಹಾಭಾರತದ ಕತೆಗಳು ನಾಟಕ ರೂಪದಲ್ಲಿ ಮೂಡಿ ಬಂದು ವೇದಿಕೆಗಳಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುವುದು ಸಾಮಾನ್ಯ. ಆದರೆ ತುಳುನಾಡಿನ ಆರಾಧ್ಯ ದೈವಗಳ ಅದ್ದೂರಿಯ ನಾಟಕ ಪ್ರದರ್ಶನವಾಗುವುದು ಕಡಿಮೆ. ಈಗ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ಈ ಕೊರತೆಯನ್ನು ನೀಗಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ದೈವಗಳ ಬಗ್ಗೆಯೂ ಈ ರೀತಿಯ ನಾಟಕಗಳನ್ನು ರಚಿಸಬಹುದು ಎಂಬ ಮಾರ್ಗದರ್ಶನ ಮಾಡಿದ್ದಾರೆ.

ವಸ್ತ್ರಾಲಂಕಾರ ವಿನ್ಯಾಸ

ಕಲಾ ಸಂಗಮ ಕಲಾವಿದರು ನಾಟಕವನ್ನು ಅರ್ಪಣೆ ಮಾಡಿದ್ದಾರೆ. ಪರಮಾನಂದ ವಿ.ಸಾಲ್ಯಾನ್ ಸಂಭಾಷಣೆ ನಾಟಕಕ್ಕಿದೆ. ಗುರುದೇವರ ಆರ್ಟ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್ ವಸ್ತ್ರಾಲಂಕಾರ ವಿನ್ಯಾಸ ಮಾಡಿದ್ದಾರೆ. ಹರೀಶ್ ಆಚಾರ್ಯ, ಚಂದ್ರಶೇಖರ ಶಿರ್ವ , ವಿಪಿನ್ ತೊತ್ತಡ ರಂಗವಿನ್ಯಾಸ ಮಾಡಿದ್ದಾರೆ.

ಕಲಾಸಂಗಮದಲ್ಲಿ ಇಡೀ ಕುಟುಂಬ

ಒಂದು ನಾಟಕ ಇರಲಿ, ಸಿನಿಮಾ ಇರಲಿ ಅಚ್ಚುಕಟ್ಟುತನಕ್ಕೆ ಹೆಸರೇ ವಿಜಯಕುಮಾರ್ ಕೊಡಿಯಾಲಬೈಲ್. ಕಲಾಸಂಗಮ ತಂಡದಲ್ಲಿ ಕೊಡಿಯಾಲಬೈಲ್ ಅವರ ಪತ್ನಿ ರೂಪಾ ವಿಜಯಕುಮಾರ್ ಸದಾ ಬೆನ್ನೆಲುಬಾಗಿದ್ದರೆ, ಪುತ್ರ ತಸ್ಮಯ್ ತಾಂತ್ರಿಕವಾಗಿ ನಿಪುಣರಾಗಿ ಎಲ್ಲ ತಾಂತ್ರಿಕ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಪುತ್ರಿ ವಿಶಿಷ್ಟ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೂ ಬಿಡುವಿನ ವೇಳೆ ನಾಟಕದಲ್ಲಿ ಬಣ್ಣ ಹಚ್ಚುವ ಮೂಲಕ ತನ್ನ ಕಲಾ ಚಾತುರ್ಯ ಮೆರೆಯುತ್ತಿದ್ದಾರೆ. ಸಹೋದರ ಚಂದ್ರಕುಮಾರ್ ಕೊಡಿಯಾಲಬೈಲ್ ನಾಟಕದ ಸಮಗ್ರ ನಿರ್ವಹಣೆ ನೋಡುವ ಮೂಲಕ ನಾಟಕದ ಯಶಸ್ಸಿಗೆ ಸದಾ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ದಿನಕ್ಕೆ ಮೂರು ಪ್ರದರ್ಶನ

ತುಳು ರಂಗಭೂಮಿಯಿಂದ ಜನ ವಿಮುಖರಾಗುತ್ತಿದ್ದಾರೆ ಎನ್ನುವ ಕೂಗು ಕೇಳಿಬಂತಹ ಸಂದರ್ಭ ಶಿವಧೂತೆ ಗುಳಿಗೆ ಎನ್ನುವ ಬೂಸ್ಟರ್ ಡೋಸ್ ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದೆ. ಒಂದೇ ದಿನ ಮೂರು ಪ್ರದರ್ಶನಗಳನ್ನು ಕಂಡದ್ದು ಇದೆ. ಸೀಸನ್‌ಗಳಲ್ಲಿ ಕನಿಷ್ಠ ಒಂದೇ ದಿನ ಎರಡು ಪ್ರದರ್ಶನಗಳನ್ನು ಕಾಣುತ್ತಿರುವುದು ನಾಟಕದ ಹೆಚ್ಚುಗಾರಿಕೆ.

ಧ್ವನಿ ಬೆಳಕಿನ ಸಮ್ಮಿಲನ

ಇಡೀ ನಾಟಕವನ್ನು ಪ್ರೇಕ್ಷಕರು ಕೊಂಡಾಡಲು ಮೂಲ ಕಾರಣ ನಾಟಕದ ರಂಗನಿರ್ವಹಣೆ, ವರ್ಣಾಲಂಕಾರ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ. ಒಟ್ಟಾಗಿ ಹೇಳುವುದಾದರೆ ಯಾವುದಕ್ಕೂ ಕೊರತೆಯಾಗದಂತೆ ಸುಂದರವಾದ ರಂಗದೃಶ್ಯ ಕಾವ್ಯವನ್ನು ಹೆಣೆದ ಕೀರ್ತಿ ಕೋಡಿಯಾಲ್‌ಬೈಲ್ ಅವರಿಗೆ ಸಲ್ಲುತ್ತದೆ.

ಒಂದೇ ದಿನ ಮೂರು ಭಾಷೆಯಲ್ಲಿ ಪ್ರದರ್ಶನ

ಅಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಒಂದೇ ದಿನ ಒಂದೇ ವೇದಿಕೆಯಲ್ಲಿ ತುಳು, ಕನ್ನಡ, ಮಲಯಾಳ ಭಾಷೆಯಲ್ಲಿ ವಿದೇಶದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಒಂದೇ ದಿನ ಮೂರು ಭಾಷೆಯಲ್ಲಿ ಒಂದೇ ತಂಡದ ಕಲಾವಿದರು ಪ್ರದರ್ಶನ ನೀಡುತ್ತಿರುವುದು ಇದೇ ಮೊದಲು ಮತ್ತು ದಾಖಲೆ. ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ಐದು ಭಾಷೆಯಲ್ಲಿ (ತುಳು, ಕನ್ನಡ, ಮಲಯಾಳ, ಇಂಗ್ಲಿಷ್, ಮರಾಠಿ) ಒಂದೇ ವೇದಿಕೆಯಲ್ಲಿ ರಂಗ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ವಿಜಯಕುಮಾರ್ ಕೊಡಿಯಾಲ್‌ಬೈಲ್ ತಿಳಿಸಿದ್ದಾರೆ.

ಏನಾದರೂ ಸಾಧನೆ ಬೇಕು

ತುಳು ರಂಗಭೂಮಿ ಎಂದರೆ ಕೇವಲ ಹಾಸ್ಯ ಎಂದು ಜರೆಯುವ ಕಾಲವಿತ್ತು. ಆದರೆ ಒಂದೇ ಒಂದು ಹಾಸ್ಯದ ತುಣುಕೇ ಇಲ್ಲದ ಈ ಪೌರಾಣಿಕ ನಾಟಕವು ಪ್ರೇಕ್ಷಕರನ್ನ ಹಿಡಿದಿಟ್ಟಿದೆ ಎಂದರೆ ನಿಜಕ್ಕೂ ಸಂತೋಷವಾಗುತ್ತದೆ. ಸಹೋದರ ಚಂದ್ರಕುಮಾರ್ ನಿರಂತರ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದ್ದು, ದೈವ ಇಚ್ಛೆಯೋ ಎಂಬಂತೆ ಗುಳಿಗ ದೈವದ ಕಾರಣಿಕ ನಾಟಕವಾಗಿ ಮೂಡಿಬಂದು ಯಶಸ್ವಿಯಾಗಿದೆ. ಮನುಷ್ಯ ಹುಟ್ಟಿದ ಬಳಿಕ ಏನಾದರೂ ಅಚ್ಚಳಿಯದೆ ಉಳಿಯುವ ಸಾಧನೆ ಮಾಡಬೇಕು. ಇದೇ ನನ್ನ ಜೀವನದ ಗುರಿ. ಆ ಕಾರಣದಿಂದ ಶಿವಧೂತೆ ಗುಳಿಗೆ ನಾಟಕ ಐದು ಭಾಷೆಗೆ ಭಾಷಾಂತರಗೊಳ್ಳುವ ಮೂಲಕ ಗಿನ್ನೆಸ್ ದಾಖಲೆ ಮಾಡಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್.

Related post

Leave a Reply

Your email address will not be published. Required fields are marked *

error: Content is protected !!