ಬೆಳ್ತಂಗಡಿ: ತಾಲೂಕಿನಾದ್ಯಂತ ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ: ಕೆ ವಸಂತ ಬಂಗೇರ ಆರೋಪ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿದ್ದ ಹಳೆಯ ಪ್ರವಾಸಿ ಬಂಗಲೆಯನ್ನು ಕೆಡವಿ ಹೊಸ ಪ್ರವಾಸಿ ಬಂಗಲೆ ತಲೆ ಎತ್ತುತ್ತಿದ್ದು, ಇದರಲ್ಲಿ ಶಾಸಕ ಹರೀಶ್ ಪೂಂಜಾರವರು 40% ಕಮಿಷನ್ ಹಣ ಕೊಳ್ಳೆ ಹೊಡೆಯುವ ಸಲುವಾಗಿ ಟೆಂಡರ್ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಿದ್ದಾರೆ. ಇತ್ತೀಚೆಗೆ ತಾಲೂಕಿನಾದ್ಯಂತ ಸುಮಾರು 411 ಕೋಟಿ ರೂಪಾಯಿಗಳ ಶಂಕುಸ್ಥಾಪನೆ ನಡೆಸಿದ್ದು, ಇದೊಂದು ರಾಜ್ಯದಲ್ಲಿಯೇ ವಿಚಿತ್ರವಾದ ಬೋಗಸ್ ಶಂಕುಸ್ಥಾಪನೆಯಾಗಿದ್ದು ಶಾಸಕರು ಆ ಮೂಲಕ ಬೆಳ್ತಂಗಡಿ ಕ್ಷೇತ್ರದ ಜನರ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದಾರೆ. ಇಂತಹ ಅನಧಿಕೃತ ಕಾಮಗಾರಿಗಳನ್ನು ಅನುಷ್ಠಾನಿಸುವ ಮೊದಲು ಗುತ್ತಿಗೆದಾರರು ಎಚ್ಚರಿಕೆ ವಹಿಸುವುದು ಉತ್ತಮ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಆಡಳಿತಕ್ಕೆ ಬರುವುದು ಖಚಿತ. ಆಗ ಈ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾ.15 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಕಡೆ ಕಳೆದ 2-3 ವರ್ಷಗಳಿಂದ ಅಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದ್ದರೂ ಬೆಳ್ತಂಗಡಿ ಯಲ್ಲಿ ಕೇವಲ ಒಂದು ಸಿಟ್ಟಿಂಗ್ ನಲ್ಲಿ ತಾಲೂಕು ಕಚೇರಿಯಲ್ಲಿ ಬಾಗಿಲು ಬಂದ್ ಮಾಡಿ ನಡೆಸಿದ ಶಾಸಕರು ನಂತರ ಬೈಟಕ್ ಮೊಟಕುಗೊಳಿಸಿ ಇದೀಗ ಗ್ರಾಮಗಳಲ್ಲಿ ಕಾನೂನು ಬಾಹಿರವಾಗಿ ಬೈಟಕ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವನ್ನು ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಂಡ ಶಾಸಕ ಹರೀಶ್ ಪೂಂಜರು ಅನಗತ್ಯ ದುಂದುವೆಚ್ಚ ನಡೆಸಿ ಸುಮಾರು 60 ಲಕ್ಷ ಹಣ ಪಾವತಿಗೆ ಬಾಕಿ ಇರಿಸಿದ್ದಾರೆ. ಬೆಳ್ತಂಗಡಿ ಗೆ ನೂತನವಾಗಿ ಆಗಮಿಸಿರುವ ತಹಶೀಲ್ದಾರ್ ರವರು ಅಕ್ರಮ ಸಕ್ರಮ ಸಿಟ್ಟಿಂಗ್ ಶಾಸಕರೊಂದಿಗೆ ಅಲೆದಾಡುವುದು ಹೊರತುಪಡಿಸಿ ಜನರಿಗೆ ಅಗತ್ಯವಾಗಿ ಬೇಕಾದ ಯಾವುದೇ ಖಡತಗಳಿಗೆ ಸಹಿ ಹಾಕುತ್ತಿಲ್ಲ. ತಹಶೀಲ್ದಾರರು ಇದೇ ರೀತಿ ಮುಂದುವರೆದರೆ ಜನರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ ವಸಂತ ಬಂಗೇರ, ವಕೀಲರಾದ ಮನೋಹರ್ ಕುಮಾರ್, ತೋಟತ್ತಾಡಿ ವೆಂಕಟರಮಣ ಗೌಡ ಉಪಸ್ಥಿತರಿದ್ದರು.