ಚಾರ್ಮಾಡಿ: ಒಂಭತ್ತು ತಿಂಗಳ ಹಿಂದೆ ಕೊಲೆಯಾದ ಯುವಕನ ಶವ ಹುಡುಕಾಟ: ಬೆಂಗಳೂರು ಹಾಗೂ ಸ್ಥಳೀಯ ಪೊಲೀಸರಿಂದ ಪರಿಶೀಲನೆ
ಚಾರ್ಮಾಡಿ: ಸುಮಾರು 9 ತಿಂಗಳ ಹಿಂದೆ ಕೊಲೆಯಾದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಬೆಂಗಳೂರು ಪೊಲೀಸರು ಮಂಗಳವಾರ ಆಗಮಿಸಿ, ಚಿಕ್ಕಮಗಳೂರು ಬೆಳ್ತಂಗಡಿ ವ್ಯಾಪ್ತಿಯ ಘಾಟಿಯ ಪ್ರದೇಶಗಳ ಕಣಿವೆಗಳಲ್ಲಿ ಸ್ಥಳೀಯ ಪೊಲೀಸರ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ.
ಬೆಂಗಳೂರಿನ ಕೋಣನಕುಂಟೆ ನಿವಾಸಿ ಶರತ್ ಎಂಬಾತ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಗ್ಯಾಂಗ್ ಶರತ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು. ಕೊಲೆಯಾದ ಎಚ್. ಶರತ್ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಸಬ್ಸಿಡಿ ದರದಲ್ಲಿ ವಾಹನ ಕೊಡಿಸುವುದಾಗಿ ನಂಬಿಸಿದ್ದ. ಆದರೆ ಕಾರು ಕೊಡಿಸದೆ ಅಲ್ಲಿನ ಜನರಿಗೆ ವಂಚಿಸಿದ್ದ.ಇದರಿಂದ ಹಣ ಕೊಟ್ಟು ಜನ ಎಚ್. ಶರತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರದ ಮಖಂಡರೊಬ್ಬರಿಗೆ ಹಣ ವಾಪಸ್ ಕೊಡಿಸುವಂತೆ ಜನ ಕೇಳಿಕೊಂಡಿದ್ದಾರೆ.
ಜನರ ಮನವಿ ಮೇರೆಗೆ ಅವರು ತನ್ನ ಪುತ್ರನಿಗೆ ಹಣ ವಸೂಲಿ ಮಾಡುವಂತೆ ಹೇಳಿದ್ದ.ಇದರಿಂದ ಇಲ್ಲಿಂದ ಶರತ್ ಕಿಡ್ನಾಪ್ ಆ್ಯಂಡ್ ಮರ್ಡರ್ ಪ್ಲಾನ್ ಆರಂಭವಾಯಿತು ಎಂದು ಕೇಳಿ ಬರುತ್ತಿದೆ.
ಮುಖಂಡರ ಪುತ್ರ ಹಾಗೂ ಆತನ ಸ್ನೇಹಿತರು, ಜತೆಗೆ ಹಣ ಪಡೆದುಕೊಂಡ ಕೆಲವರು ಸೇರಿ ಶರತ್ ನನ್ನು ಕಿಡ್ನಾಪ್ ಮಾಡಿ ಆತನ ಮೊಬೈಲ್ ನಿಂದಲೇ ಯುವಕನ ತಂದೆ ತಾಯಿಗೆ ‘ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಮೆಸೇಜ್’ ಹಾಕಿ ಬಳಿಕ ಮೊಬೈಲನ್ನು ಲಾರಿಯೊಂದರ ಮೇಲೆ ಎಸೆದಿದ್ದಾರೆ.
ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಪ್ರಯಾಣವಾಗಿದ್ದು ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇಷ್ಟರಲ್ಲಿ ಶರತ್ ನನ್ನು ಬನಶಂಕರಿಯಿಂದ ಅಪಹರಿಸಿದ ಗ್ಯಾಂಗ್ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವಾಟದ ಹೊಸಹಳ್ಳಿಯ ಮಾವಿನ ತೋಟದ ಮನೆಯೊಂದರಲ್ಲಿ ಬಂಧನದಲ್ಲಿ ಇಡಲಾಗಿತ್ತು. ಬಳಿಕ ಆತನಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಕೊಲೆಯಾದ ಶರತ್ ನ ಶವನನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಸುತ್ತಿದ್ದಾರೆ.
ಪತ್ರ ನೀಡಿದ ಸುಳಿವು
ಈ ಕಿಡ್ನಾಪ್, ಕೊಲೆ 9 ತಿಂಗಳ ಹಿಂದೆಯೇ ನಡೆದಿದೆ. ಆದರೆ ಪ್ರಕರಣ ನಡೆದು ಕೆಲವು ತಿಂಗಳ ನಂತರ ಕೇಂದ್ರ ವಿಭಾಗದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದ ಪತ್ರ ಹಾಗೂ ಚಿತ್ರಹಿಂಸೆ ನೀಡಿದ ದೃಶ್ಯದ ಪೆನ್ ಡ್ರೈವ್ ಕೊಲೆಯ ಸುಳಿವು ನೀಡಿದೆ. ಬಳಿಕ ಪೊಲೀಸರು ವಿಶೇಷ ತಂಡ ರಚಿಸಿ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 5ಜನರನ್ನು ಬಂಧಿಸಿದಾಗ ಘಟನೆಯ ಸಂಪೂರ್ಣ ಚಿತ್ರಣ ದೊರಕಿದ್ದು ಆರೋಪಿಗಳನ್ನೂ ಪೊಲೀಸರು ಚಾರ್ಮಾಡಿ ಘಾಟಿ ಪರಿಸರಕ್ಕೆ ತಂದು ಶವ ಹುಡುಕಲು ಮುಂದಾಗಿದ್ದಾರೆ.
ಶವ ಹುಡುಕುವುದೇ ಸವಾಲು
ದಕ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಚಾರ್ಮಾಡಿ ಘಾಟಿ ಸಾಕಷ್ಟು ಕಣಿವೆ ಪ್ರದೇಶಗಳನ್ನು ಹೊಂದಿದೆ. ಘಾಟಿಯ ಸ್ಥಳಗಳಲ್ಲಿ ವಿಪರೀತ ಪೊದೆಗಳು ಆಳವಾದ ಕಂದಕಗಳು ಇವೆ. ಘಟನೆ ನಡೆದು 9 ತಿಂಗಳು ಕಳೆದಿರುವುದರಿಂದ ಇಲ್ಲಿ ತಂದು ಎಸೆಯಲಾಗಿದೆ ಎಂದಿರುವ ಶವ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ, ಪ್ರದೇಶದಲ್ಲಿ ಸಾಕಷ್ಟು ವನ್ಯಮೃಗಗಳು ಇದ್ದು ಹೂಗಳ ಪಾಲಾಗಿರುವ ಶಂಕೆಯು ಇದೆ.