ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ: 17 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿ: ಪಾದಾಯಾತ್ರೆಗೆ ಮೆರುಗು ನೀಡಿದ ವಿವಿಧ ವೇಷ ಭೂಷಣಗಳು
ಉಜಿರೆ: ಸಾವಿರಾರು ಭಕ್ತರ ತಾಣವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ. ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ದಶಮಾನೋತ್ಸವ ಪಾದಯಾತ್ರೆ ನ.19ರಂದು ಜರುಗಿತು.
17 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಹೊರ ತಾಲೂಕಿನ ಭಕ್ತರು ಭಾಗಿಯಾಗಿದ್ದರು. ವಿವಿಧ ವೇಷ ಭೂಷಣಗಳು, ಭಜನಾ ತಂಡಗಳು ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿದೆ.
ಉಜಿರೆ ದೇವಸ್ಥಾನದ ವಠಾರದಲ್ಲಿ ಶ್ರೀ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರವರು ದೀಪ ಪ್ರಜ್ವಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಹರಿಶ್ ಕುಮಾರ್, ಕೆ.ಪ್ರತಾಪಸಿಂಹ ನಾಯಕ್, ಪೂರಣ್ ವಮ೯, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಸ್ವಾಮಿ, ತಾಲೂಕು ಅಧ್ಯಕ್ಷೆ ಶಾರದಾ ಆರ್.ರೈ,, ಕೆ.ಎನ್ ಜನಾರ್ದನ್, ಉದ್ಯಮಿ ಮೋಹನ ಶೆಟ್ಟಿಗಾರ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಉದ್ಯಮಿ ರಾಘವೇಂದ್ರ ಬೈಪಾಡಿತ್ತಾಯ, ಸಂಧ್ಯಾ ಟ್ರೆಡರ್‍ಸ್‌ನ ರಾಜೇಶ್ ಪೈ, ಮಮತಾ ರಾವ್, ವಿವೇಕ್ ವಿನ್ಸೆಂಟ್ ಪಾಯಿಸ್, ಮಮತಾ ಎಂ. ಶೆಟ್ಟಿ, ರಾಜಶೇಖರ ಅಜ್ರಿ, ಶಶಿಧರ ಕಲ್ಮಂಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್, ನ್ಯಾಯವಾದಿ ಧನಂಜಯ ರಾವ್, ಅಡೂರು ವೆಂಕಟ್ರಾವ್, ಜಯಂತ್ ಶೆಟ್ಟಿ, ಲೋಕೇಶ್ವರಿ ವಿನಯಚಂದ್ರ, ತಿಮ್ಮಪ್ಪ ಗೌಡ ಬೆಳಾಲು, ವಸಂತ ಮಜಲು, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ವಿಠಲ ಶೆಟ್ಟಿ ಲಾಯಿಲ, ಶಂಕರ ಹೇಡ್ಯ, ಯೋಗೀಶ್ ಕುಮಾರ್ ನಡಕ್ಕರ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ ಪಿ.ಕೆ ರಾಜು ಪೂಜಾರಿ ಕಾಶಿಪಟ್ಣ, ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹೆಗ್ಡೆ, ವಲಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಪುಷ್ಪರಾಜ ಹೆಗ್ಡೆ, ನಾಮದೇವ ರಾವ್ ಮುಂಡಾಜೆ, ಮಂಜುನಾಥ ಕಾಮತ್ ಕೊಲ್ಲಿ, ರಾಘವೇಂದ್ರ ಡಾ. ಶ್ರೀಧರ್ ಭಟ್ , ಬೈಪಡಿತ್ತಾಯ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯಶವಂತ್ ಕುಮಾರ್, ಲಕ್ಷ್ಮಣ ಗೌಡ, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹೆಗ್ಗಡೆ ಅಭಿಮಾನಿಗಳು ಮೆರವಣಿಗೆಯ ಜೊತೆ ಸಾಗಿದರು.
ಉಜಿರೆ ರಥಬೀದಿಯಿಂದ ಧರ್ಮಸ್ಥಳ ತನಕ ನಡೆದ ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿ ಭಜನಾ ತಂಡಗಳು, ಚೆಂಡೆ, ಕೊಂಬು, ಕಹಳೆ, ವಿವಿಧ ವೇಷ, ಭೂಷಣಗಳ ತಂಡಗಳು ತಾಲೂಕಿನ ವಿವಿಧ ಭಜನಾ ಮಂಡಳಗಳ ತಂಡ ಮೆರವಣಿಗೆ ಜೊತೆ ಸಾಗಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಗತಿ ಬಂಧು ತಂಡಗಳು, ಕ್ಷೇತ್ರದ ಸಿಬ್ಬಂದಿಗಳು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಾಗರಿಕರು ಮೆರವಣಿಗೆಯುದ್ದಕ್ಕೂ ಸಾಗಿದರು
ಉಜಿರೆಯಿಂದ ಸುಮಾರು ಹತ್ತು ಕಿ.ಮೀ ದೂರದ ಧರ್ಮಸ್ಥಳಕ್ಕೆ ಪಾದಯಾತ್ರಿಗಳು ಬರುತ್ತಿದ್ದಂತೆ ಧರ್ಮಸ್ಥಳ ಮಹಾದ್ವಾರದ ಬಳಿ ಕ್ಷೇತ್ರದ ವತಿಯಿಂದ ವಾದ್ಯಘೋಷಗಳೊಂದಿಗೆ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಡಾ. ಹೆಗ್ಗಡೆಯವರ ಆಪ್ತ ಸಹಾಯಕ ಎ. ವೀರೂ ಶೆಟ್ಟಿ, ದೇವಸ್ಥಾನದ ಪಾರುಪತ್ಯೆಗಾರ ಲಕ್ಷ್ಮೀನಾರಾಯಣ ರಾವ್ ಮತ್ತಿತರರು ಪಾದಯಾತ್ರಿಗಳನ್ನು ಸ್ವಾಗತಿಸಿದರು. ಅಮೃತವರ್ಷಿಣಿ ಸಭಾ ಭವನದಲ್ಲೂ ಹಳೆಕೋಟೆಯ ಶ್ರೀ ಭಗವಾನ್ ಶಿರ್ಡಿ ಸಾಯಿ ಸತ್ಯಸಾಯಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.
ಪಾದಯಾತ್ರಿಗಳು ಶಿಸ್ತುಬದ್ಧವಾಗಿ ಸಾಗಿದರು. ಪಾದಯಾತ್ರೆಯುದ್ದಕ್ಕೂ ಜನರು ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರು. ಕನ್ಯಾಡಿಯಲ್ಲಿ ಸೇವಾ ಭಾರತಿ, ಶಾಂತಿವನ ಹಾಗೂ ಇತರ ಕಡೆಗಳಲ್ಲೂ ಪಾದಯಾತ್ರಿಗಳಿಗೆ ಶರಬತ್, ಕುಡಿಯುವ ನೀರು, ಪಾನೀಯ, ಪಾನಕದ ವ್ಯವಸ್ಥೆಯನ್ನು ಮಾಡಿದರು.