• November 21, 2024

ತುಳುನಾಡಿನ ದೈವಾರಾಧನೆಗೆ ಅಪಚಾರ ಎಸಗಿದ ಮಹಿಳೆ: ಕದ್ರಿ ದೇವಸ್ಥಾನದಲ್ಲಿ ಕಣ್ಣೀರಿಟ್ಟು ದೇವರ ಮುಂದೆ ಕ್ಷಮೆ

 ತುಳುನಾಡಿನ ದೈವಾರಾಧನೆಗೆ ಅಪಚಾರ ಎಸಗಿದ ಮಹಿಳೆ: ಕದ್ರಿ ದೇವಸ್ಥಾನದಲ್ಲಿ ಕಣ್ಣೀರಿಟ್ಟು ದೇವರ ಮುಂದೆ ಕ್ಷಮೆ

 

ಮಂಗಳೂರು (ಆ.14): ತುಳುನಾಡಿನ ಜನರ ನಂಬಿಕೆ ಹಾಗೂ ಅಸ್ಮಿತೆಯಾದ ದೈವಾರಾಧನೆಗೆ ಅಪಚಾರ ಎಸಗಿದ ಮಹಿಳೆಯೊಬ್ಬರು ಬುಧವಾರ ಕದ್ರಿ ದೇವಸ್ಥಾನಕ್ಕೆ ಆಗಮಿಸಿ ಕಣ್ಣೀರಿಟ್ಟು ದೇವರ ಕ್ಷಮೆ ಕೇಳಿದ್ದಾರೆ. ಬಳಿಕ ಕದ್ರಿ ಮಂಜುನಾಥನಿಗೆ ಮಂಡಿಮಯೂರಿ ಮಹಿಳೆ ಕ್ಷಮೆಯಾಚಿಸಿದ್ದಾರೆ.

ದೈವನರ್ತನ ಮಾಡುವ ಮೂಲಕ ತುಳುನಾಡ ದೈವಾರಾಧನೆಗೆ ಮಹಿಳೆ ಅಪಮಾನ ಮಾಡಿದ್ದರು. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಕದ್ರಿ ಮಂಜುನಾಥ ಸ್ವಾಮಿಗೆ ಮಂಡಿಯೂರಿ ಮಹಿಳೆ ಕ್ಷಮೆ ಯಾಚಿಸಿದ್ದಾರೆ. ಅದರೊಂದಿಗೆ ದೇವರಿಗೆ ತಪ್ಪು ಕಾಣಿಕೆಯನ್ನೂ ಕೂಡ ಅವರು ಸಲ್ಲಿಕೆ ಮಾಡಿದ್ದಾರೆ. ಮಂಗಳೂರಿನ ಕವಿತಾ ರಾವ್‌ ಎನ್ನುವವರು ದೈವಾರಾಧನೆಗೆ ಅಪಚಾರ ಮಾಡುವಂಥ ಕೃತ್ಯ ಮಾಡಿದ್ದರು. ಇದಕ್ಕಾಗಿ ಕದ್ರಿ ದೇವಸ್ಥಾನಕ್ಕೆ ಬುಧವಾರ ಆಗಮಿಸಿ ಕ್ಷಮೆ ಕೋರಿದ್ದಾರೆ.

ರುದ್ರಾಭಿಷೇಕ ಹಾಗೂ ತಂಬಿಲ ಸೇವೆ ಸಲ್ಲಿಸಿ ದೇವರಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಕಲ್ಲುರ್ಟಿ ದೈವಕ್ಕೆ ಕೋಲ ಹಾಗೂ ಚಂಡಿಕಾಯಾಗ ಕೊಡುವ ಪ್ರಾರ್ಥನೆಯನ್ನೂ ಅವರು ಮಾಡಿಕೊಂಡಿದ್ದಾರೆ. ಮಂಜುನಾಥ ದೇವರ ಸನ್ನಿಧಿಯಲ್ಲಿ ತಪ್ಪಾಯ್ತು ಅಂತ ಕವಿತಾ ರಾವ್‌ ಗಳಗಳನೆ ಅತ್ತುಬಿಟ್ಟಿದ್ದಾರೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ದೇವರ ಎದುರು ಕ್ಷಮೆಯಾಚನೆ ಮಾಡಿದ್ದಾರೆ. ದೈವಾರಾಧಕ ದಯಾನಂದ ಕತ್ತಲ್ ಸಾರ್ ಜೊತೆಗೆ ಆಗಮಿಸಿದ ಕವಿತಾ ರಾವ್ ಕ್ಷಮೆ ಕೇಳಿ ಹೋಗಿದ್ದಾರೆ.ಕವಿತಾ ರಾವ್‌ ಅವರ ವಿಡಿಯೋ ವೈರಲ್‌ ಆದ ಬಳಿಕ ದೈವಾರಾಧಕರು ಮತ್ತು ಹಿಂದೂ ಸಂಘಟನೆಗಳು ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದವು. ಈ ವೇಳೆ ಕವಿತಾ ರಾವ್‌ಗೆ ಬುದ್ದಿಮಾತು ಹೇಳಿ ದಯಾನಂದ ಕತ್ತಲ್ ಸಾರ್ ಅವರು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಅಟಿ ಕೂಟದಲ್ಲಿ ದೈವನರ್ತನ ಮಾಡಿ ದೈವಾರಾಧನೆಗೆ ಕವಿತಾ ರಾವ್‌ ಅಪಮಾನ ಮಾಡಿದ್ದರು.

ಮಂಗಳೂರಿನ ಯೆಯ್ಯಾಡಿ ಬಳಿ ನಡೆದ ಕಾರ್ಯಕ್ರದಲ್ಲಿ ಕವಿತಾ ರಾವ್‌ ದೈವ ನರ್ತನ ಮಾಡಿದ್ದರು. ಆಟಿಡೊಂಜಿ ದಿನ ಎಂಬ ಕಾರ್ಯಕ್ರಮದಲ್ಲಿ ಕವಿತಾ ರಾವ್ ದೈವ ನರ್ತನದ ಅಪಹಾಸ್ಯ ಮಾಡಿದ್ದರು. ಕಾರ್ಯಕ್ರಮದಲ್ಲಿ ತುಳು ಹಾಡಿಗೆ ಕವಿತಾ ರಾವ್‌ ಅವರು ದೈವ ನರ್ತನ ಮಾಡಿದ್ದರೆ, ಕಾರ್ಯಕ್ರಮದಲ್ಲಿ ಸೇರಿದ್ದ ಹಲವರಿಂದ ಚಪ್ಪಾಳೆ ತಟ್ಟಿ ಮಹಿಳೆಗೆ ಪ್ರೋತ್ಸಾಹವನ್ನೂ ನೀಡಲಾಗಿತ್ತು. ಮಹಿಳೆಯ ದೈವ ನರ್ತನದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಕಾರ್ಯಕ್ರಮ ಆಯೋಜಕರನ್ನು ಕರೆ ಮಾಡಿ ಜನರು ತರಾಟೆಗೆ ತೆಗೆದುಕೊಂಡಿದ್ದರು. ಮಹಿಳೆ ದೈವದ ಎದುರು ನಿಂತು ಕ್ಷಮೆ ಯಾಚಿಸುವಂತೆ ಆಗ್ರಹ ಮಾಡಲಾಗಿತ್ತು. ಮಂಗಳೂರು ಮಾತ್ರವಲ್ಲದೆ, ಇಡೀ ಕರಾವಳಿಯಲ್ಲಿ ಈ ವಿಡಿಯೋ ವ್ಯಾಪಕವಾಗಿ ಚರ್ಚೆಯಾಗಿತ್ತು.

*ಉಡುಪಿ: ಅಣ್ಣಪ್ಪ ಪಂಜುರ್ಲಿ ದೈವಾರಾಧನೆಯಲ್ಲಿ ಭಾಗವಹಿಸಿದ ಪಾಕ್‌ ಮೂಲದ ಕುಟುಂಬ

ನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ ಇನ್ನು ಮುಂದೆ ಯಾರೂ ದಯವಿಟ್ಟು ಇಂಥಹ ತಪ್ಪು ಮಾಡಲೇ ಬೇಡಿ ಎಂದು ಕವಿತಾ ರಾವ್‌ ಹೇಳಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!